ಬೆಳಗಾವಿ: ಲಾಕ್ಡೌನ್ ಬಳಿಕ ಮದ್ಯದಂಗಡಿ ನಿನ್ನೆಯಿಂದ ಮರು ಆರಂಭವಾಗಿದ್ದು, ಬೆಳಗಾವಿ ವಿಭಾಗದಲ್ಲಿ ನಿನ್ನೆ ಒಂದೇ ದಿನಕ್ಕೆ 18 ಕೋಟಿ ರೂ, ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ. ವೈ. ಮಂಜುನಾಥ ತಿಳಿಸಿದರು.
ಬೆಳಗಾವಿಯ ಅಬಕಾರಿ ಇಲಾಖೆ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ ಹಾಗೂ ಹಾವೇರಿ ವ್ಯಾಪ್ತಿಯನ್ನು ಬೆಳಗಾವಿ ವಿಭಾಗ ಹೊಂದಿದೆ. ಬೆಳಗಾವಿ ವಿಭಾಗದಲ್ಲಿ 15.38 ಕೋಟಿ ರೂ, ಮೌಲ್ಯದ 3.79 ಲಕ್ಷ ಲೀಟರ್ ಮದ್ಯ ಹಾಗೂ 2.55 ಕೋಟಿ ರೂ, ಮೌಲ್ಯದ ಬಿಯರ್ ಮಾರಾಟವಾಗಿದೆ ಎಂದರು.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಿನ್ನೆ ಒಂದೇ ದಿನ 6 ಕೋಟಿ ರೂ, ಮೌಲ್ಯದ ಮದ್ಯ ಮಾರಾಟ ಆಗಿದೆ. 1.30 ಲಕ್ಷ ಲೀಟರ್ ಮದ್ಯ ಹಾಗೂ 40 ಸಾವಿರ ಲೀಟರ್ ಬಿಯರ್ ಮಾರಾಟ ಆಗಿದೆ ಎಂದಿದ್ದಾರೆ.
ಇನ್ನೆರಡು ದಿನಗಳಲ್ಲಿ ಮದ್ಯ ಮಾರಾಟ ಸ್ಥಗಿತಗೊಳ್ಳಲಿದೆ ಎಂಬ ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಮದ್ಯಮಾರಾಟ ಸ್ಥಗಿತವಾಗಲಿದೆ ಎಂಬುವುದು ಸುಳ್ಳು. ಆದರೆ ಮದ್ಯ ಖರೀದಿಗೆ ಬರುವ ಗ್ರಾಹಕ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮದ್ಯದಂಗಡಿ ಮಾಲಿಕರು ಕಡ್ಡಾಯವಾಗಿ ಮಾಸ್ಕ್ ಜತೆಗೆ ಹ್ಯಾಂಡ್ ಗ್ಲೌಸ್ ಧರಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.