ಬೆಳಗಾವಿ: ಕೋವಿಡ್-19 ಸೋಂಕು ತಗುಲಿದ್ದ ಬೆಳಗಾವಿ, ಹುಕ್ಕೇರಿ, ಚಿಕ್ಕೋಡಿ ಹಾಗೂ ಗೋಕಾಕ್ ತಾಲೂಕಿನ ಒಟ್ಟು 15 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸೋಂಕಿತರೆಲ್ಲರೂ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ವರದಿ ನೆಗೆಟಿವ್ ಬಂದಿರುವ ಹಿನ್ನೆಲೆ ಹದಿನೈದು ಜನರನ್ನು ಮನೆಗೆ ಕಳುಹಿಸಲಾಗಿದೆ.
ಬೆಳಗಾವಿ ತಾಲೂಕಿನ 7, ಹುಕ್ಕೇರಿ ತಾಲೂಕಿನ 4, ಚಿಕ್ಕೋಡಿ ತಾಲೂಕಿನ 2, ಗೋಕಾಕ್ ತಾಲೂಕಿನ 1 ಹಾಗೂ ಮಹಾರಾಷ್ಟ್ರದ ಚಂದಗಡ ತಾಲೂಕಿನ ಒಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 307 ಸೋಂಕಿತರು ಪತ್ತೆಯಾಗಿದ್ದು, ಅದರಲ್ಲಿ 254 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದಂತೆ 52 ಪ್ರಕರಣಗಳು ಸಕ್ರಿಯವಾಗಿದ್ದು, ಅವರು ಕೂಡ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.