ಬೆಳಗಾವಿ: ಇಲ್ಲಿ ಹಿಂದೂ, ಮುಸ್ಲಿಂ ಅನ್ನದೇ ಎಲ್ಲ ಸಮುದಾಯದ ಜೋಡಿಗಳು ಒಂದೇ ವೇದಿಕೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸರ್ವಧರ್ಮೀಯರ ಮದುವೆ ಮಾಡುವುದರ ಮೂಲಕ ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ರವಾನಿಸುವ ಕೆಲಸ ಈ ವೇದಿಕೆಯಿಂದ ಆಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಕ್ರಾಸ್ ಬಳಿ ಇರುವ ಮದರಸಾ ಎ ಅರಬಿಯಾ ಅನ್ವಾರುಲ್ ಉಲೂಮ್‌ನಲ್ಲಿ 101 ಜೋಡಿಗಳ ಸಾಮೂಹಿಕ ಮದುವೆ ಸಮಾರಂಭ ನಡೆಯಿತು. ದೇಶದಲ್ಲಿ ಮೊದಲ ಬಾರಿಗೆ ಮದರಸಾದಲ್ಲಿ ಉಭಯ ಧರ್ಮಗಳ ಜನರ ಮದುವೆ ಮಾಡಿ ಹೊಸ ಇತಿಹಾಸ ಸೃಷ್ಟಿಸಲಾಗಿದೆ. 25 ಹಿಂದೂ ನವ ಜೋಡಿಗಳು ಇಲ್ಲಿ ಹೊಸ ಬಾಳಿಗೆ ಹೆಜ್ಜೆ ಇಟ್ಟಿದ್ದಾರೆ.
ಇದೇ ಸಮಾರಂಭದಲ್ಲಿ 76 ಮುಸ್ಲಿಂ ನವ ಜೋಡಿಗಳು ಶಾದಿ ಮಾಡಿಕೊಂಡು ಜಂಟಿಯಾದರು. ಮೌಲ್ವಿಗಳು ಹಾಗೂ ಮುಸ್ಲಿಂ ಮುಖಂಡರು ಸೇರಿಕೊಂಡು ಇಂತಹದ್ದೊಂದು ವಿನೂತನ ಪದ್ಧತಿಗೆ ನಾಂದಿ ಹಾಡಿದ್ದಾರೆ. ಇದಕ್ಕೆ ಹಿಂದೂ ಧರ್ಮದ ಜನರು ಸಾಥ್ ನೀಡಿದ್ದು, ಸಮಾಜಕ್ಕೊಂದು ಒಳ್ಳೆಯ ಸಂದೇಶ ರವಾನಿಸಿದರು.
ಹಿಂದೂ ಧರ್ಮಿಯರಿಗೆ ಸ್ಥಳೀಯ ಸ್ವಾಮೀಜಿಗಳು ಮಂತ್ರ ಹೇಳಿ ಅಕ್ಷತೆ ಹಾಕಿ ಮದುವೆ ಮಾಡಿದ್ರೆ, ಇತ್ತ ಮುಸ್ಲಿಂ ಜೋಡಿಗಳು ಮೌಲ್ವಿಗಳ ಸಮ್ಮುಖದಲ್ಲಿ ಖಬೂಲ್ ಹೈ ಎಂದು ಹೇಳುವ ಮೂಲಕ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾದರು. ಮದುವೆಯಾದ ನವ ಜೋಡಿಗಳಿಗೆ ಪಾತ್ರೆ, ತಿಜೋರಿ, ಫ್ರಿಡ್ಜ್, ಹೊಲಿಗೆ ಯಂತ್ರ, ಚೇರ್ಗಳು, ಗಾದಿ ಮತ್ತು ಮಂಚ ನೀಡಲಾಯಿತು. ಈ ಎಲ್ಲ ಸಾಮಾಗ್ರಿಗಳ ಜತೆಗೆ ಕೊನೆಯಲ್ಲಿ ಮುಸ್ಲಿಮರ ಪವಿತ್ರ ಗ್ರಂಥ ಖುರಾನ್ ನೀಡಿ ಹೊಸ ಜೋಡಿಗಳಿಗೆ ಶುಭ ಹಾರೈಸಲಾಯಿತು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಕಿತ್ತೂರು, ಖಾನಾಪುರ, ರಾಮದುರ್ಗ ಮತ್ತು ಸವದತ್ತಿ ತಾಲೂಕಿನಿಂದ ಮದುವೆ ಮಾಡಿಕೊಳ್ಳಲು ಜೋಡಿಗಳು ಆಗಮಿಸಿದ್ದವು. ಕಾರ್ಯಕ್ರಮಕ್ಕೆ ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಕೂಡ ಆಗಮಿಸಿ ನವ ಜೋಡಿಗಳಿಗೆ ಶುಭ ಕೋರಿದರು. ಇನ್ನು ಕೇಸರಿಬಾತ್, ಬದನೆಕಾಯಿ ಪಲ್ಯ, ಅನ್ನ, ಸಾಂಬಾರ್, ಪುಲಾವ್ ರೈಸ್ ಹೀಗೆ ವಿವಿಧ ಬಗೆಯ ಊಟದ ವ್ಯವಸ್ಥೆ ಮಾಡಲಾಗಿತ್ತು.