ಬೆಳಗಾವಿ: ಕೊರೊನಾ ವಿರುದ್ಧ ಹೋರಾಟಕ್ಕೆ ನೆರವಾಗಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ವತಿಯಿಂದ ಒಂದು ಕೋಟಿ ರೂ. ನೆರವು ನೀಡಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಂಸದ ರಮೇಶ್ ಕತ್ತಿ ತಿಳಿಸಿದ್ದಾರೆ.
ಬ್ಯಾಂಕ್ನ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಆರಂಭಿಕ ಹಂತದಲ್ಲಿ ಡಿಸಿಸಿ ಬ್ಯಾಂಕ್ನಿಂದ ಕೊರೊನಾ ವಿರುದ್ಧ ಹೋರಾಟಕ್ಕೆ ಒಂದು ಕೋಟಿ ರೂ. ಸಿಎಂ ಪರಿಹಾರ ನಿಧಿಗೆ ನೀಡಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ನೆರವಿನ ಅಗತ್ಯತೆ ಎದುರಾದರೆ ಮುಂಬರುವ ದಿನಗಳಲ್ಲಿ ಮತ್ತೆ ಬ್ಯಾಂಕ್ನಿಂದ ದೇಣಿಗೆ ನೀಡಲಾಗುವುದು.
ಒಂದು ಕೋಟಿ ರೂ. ದೇಣಿಗೆ ನೀಡುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗೆ ಮಾಹಿತಿ ನೀಡಲಾಗಿದೆ. ಒಂದು ಕೋಟಿ ರೂ., ಚೆಕ್ ಕೂಡ ಸಿದ್ಧವಾಗಿದೆ. ಜಿಲ್ಲೆಯ ಮುಖಂಡರಾದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಲಕ್ಷ್ಮಣ ಸವದಿ, ಆನಂದ ಮಾಮನಿ, ಮಹಾಂತೇಶ ದೊಡ್ಡಗೌಡರ ಶೀಘ್ರವೇ ಸಿಎಂಗೆ ಚೆಕ್ ತಲುಪಿಸಲಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಪ್ರತಿಕ್ರಿಯಿಸಿದ್ದಾರೆ.