ಬೆಂಗಳೂರು: ಕೊರೊನಾ ಬಂದಾಗಿನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜಿಮ್ ಮಾಲೀಕರು ಹಾಗೂ ವೃತ್ತಿಪರ ಬಾಡಿ ಬಿಲ್ಡರ್ಗಳು ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಜಿಮ್ ಗಳನ್ನು ತೆರೆಯಲು ಅನುಮತಿ ನೀಡುವಂತೆ ಮನವಿ ಮಾಡಿದರು.
ಜಿಮ್ನಲ್ಲಿ ಕೋವಿಡ್ ಮಾರ್ಗಸೂಚಿಗಳು ಸೇರಿದಂತೆ ಎಲ್ಲ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧರಿದ್ದೇವೆ. ಹೀಗಾಗಿ, ಶೇಕಡಾ 50 ರಷ್ಟು ಜನರೊಂದಿಗೆ ಜಿಮ್ ನಡೆಸಲಿಕ್ಕಾದರೂ ಅನುಮತಿ ಕೊಡಿ ಎಂದು ಜಿಮ್ ಮಾಲೀಕರು ಮನವಿ ಮಾಡಿದ್ದಾರೆ.
ಬೆಂಗಳೂರಿನ ವಿಜಯನಗರದ ಐರನ್ ಟೆಂಪಲ್ ಮಾಲೀಕ ಹಾಗೂ ರಾಷ್ಟ್ರಮಟ್ಟದ ದೇಹದಾರ್ಢ್ಯ ಪಟು ವಿಶ್ವಾಸ್ ಗೌಡ, ವಿದ್ಯಾರಣ್ಯಪುರದ ಐರನ್ ಅಡಿಕ್ಟ್ ಜಿಮ್ ಮಾಲೀಕ ಹಾಗೂ ಮಿಸ್ಟರ್ ಇಂಡಿಯಾ ಸ್ಪರ್ಧಿ ಸೂರಜ್, ಜಿಮ್ ಮಾಲೀಕರಾದ ರಾಜೇಶ್, ಸುಜಿತ್, ವಿನೋದ್ ಅವರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಲಿಖಿತ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ, ರಾಜ್ಯದಲ್ಲಿ ಸುಮಾರು 10 ಸಾವಿರ ಜಿಮ್ಗಳಿದ್ದು, ಇವನ್ನೇ ನಂಬಿಕೊಂಡು ಅವರ ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿವೆ. ಆದರೆ, ಕೊರೊನಾ ಬಂದಾಗಿನಿಂದ ಲಾಕ್ ಡೌನ್ ಜಾರಿ ಮಾಡುತ್ತಿದ್ದು, ಜಿಮ್ ಗಳನ್ನು ನಡೆಸಲು ಅನುಮತಿಸುತ್ತಿಲ್ಲ. ಇದರಿಂದಾಗಿ ಜಿಮ್ ಮಾಲೀಕರು, ತರಬೇತುದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕ ಜಿಮ್ ಮಾಲೀಕರು ಬ್ಯಾಂಕ್ಗಳಿಂದ ಸಾಲ ಪಡೆದು ಜಿಮ್ ತೆರೆದಿದ್ದಾರೆ. ಆದರೆ ಕೋವಿಡ್ ನಿಯಮಗಳಿಂದಾಗಿ ಜಿಮ್ಗಳು ಬಾಗಿಲು ಮುಚ್ಚಿದ್ದು, ಬ್ಯಾಂಕ್ ಸಾಲದ ಕಂತು, ಜಿಮ್ ಕಟ್ಟಡದ ಬಾಡಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಮನೆ ಬಾಡಿಗೆ ಸೇರಿದಂತೆ ದೈನಂದಿನ ಜೀವನ ನಿರ್ವಹಣೆಯೂ ಕಷ್ಟವಾಗುತ್ತಿದೆ. ಸರ್ಕಾರ ಅನ್ ಲಾಕ್ ಪ್ರಕ್ರಿಯೆಯಲ್ಲಿ ಕೆಲ ಉದ್ದಿಮೆಗಳನ್ನು ನಡೆಸಲು ಈಗಾಗಲೇ ಅನುಮತಿ ನೀಡಿದೆ. ಅದೇ ರೀತಿ ತಮಗೂ ಜಿಮ್ ಗಳನ್ನು ತೆರೆಯಲು ಅನುಮತಿ ನೀಡಿ ಎಂದು ಕೋರಿದ್ದಾರೆ.
ಮನವಿ ಸ್ವೀಕರಿಸಿರುವ ಸಿಎಂ ಯಡಿಯೂರಪ್ಪ ಮುಂದಿನ ಅನ್ ಲಾಕ್ ವೇಳೆ ಜಿಮ್ ತೆರೆಯಲು ಅನುಮತಿ ನೀಡುವ ಭರವಸೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ.