ಬೆಂಗಳೂರು : ನಿರಂತರವಾಗಿ ಏರುತ್ತಿರುವ ಇಂಧನ ಬೆಲೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಹೊಸ ವಿದ್ಯುತ್ ವಾಹನವೂ ದುಬಾರಿ, ಅದನ್ನು ಖರೀದಿ ಮಾಡೋಣ ಅಂದುಕೊಂಡರೆ ಅದಕ್ಕೆ ಕನಿಷ್ಠ ರೂ. 70,000 ಬೇಕಾಗುತ್ತದೆ. ಇದನ್ನೆಲ್ಲಾ ಗಮನಿಸಿದ ಝುಯಿಂಕ್ ಸಂಸ್ಥೆ ₹27,000ಕ್ಕೆ ಇಂಧನ ವಾಹನವನ್ನ ವಿದ್ಯುತ್ ವಾಹನಕ್ಕೆ ಪರಿವರ್ತನೆ ಮಾಡುವ ತಂತ್ರಜ್ಞಾನ ರೂಪಿಸಿದೆ.
ಬೌನ್ಸ್ ಸಂಸ್ಥೆಯ ಉಪಸಂಸ್ಥೆಯಾಗಿರುವ ಝುಯಿಂಕ್ ಸಂಸ್ಥೆ ಲಾಕ್ಡೌನ್ ಸಂದರ್ಭದಲ್ಲಿ ಈ ತಂತ್ರಜ್ಞಾನದ ಬಗ್ಗೆ ಸಂಶೋಧನೆ ನಡೆಸಿದೆ. ಈ ವರ್ಷದ ಅಂತ್ಯದಿಂದ ಸಾರ್ವಜನಿಕರು ಈ ತಂತ್ರಜ್ಞಾನದ ಲಾಭ ಪಡೆಯಬಹುದು.
ಪ್ರತಿ ಇಂಧನ ಚಾಲಿತ ದ್ವಿಚಕ್ರ ವಾಹನ ಸರಾಸರಿ 35 ರಿಂದ 40 ಕಿ.ಮೀ. ಪ್ರತಿ ಲೀಟರ್ ಪೆಟ್ರೋಲ್ನಿಂದ ಕ್ರಮಿಸಬಹುದು. ಆದರೆ, ಝುಯಿಂಕ್ ಸಂಸ್ಥೆಯ ರೆಟ್ರೋ ಫಿಟ್ ತಂತ್ರಜ್ಞಾನದಿಂದ ಇಂಧನ ವಾಹನ ವಿದ್ಯುತ್ ಚಾಲಿತ ವಾಹನಕ್ಕೆ ಪರಿವರ್ತನೆ ಆಗಲಿದೆ. ₹85ಗೆ 55 ಕಿ.ಮೀ ಕ್ರಮಿಸಬಹುದು ಅಂತಾರೆ ಝುಯಿಂಕ್ ಸಂಸ್ಥೆಯ ಉಪಾಧ್ಯಕ್ಷ ಸಚಿನ್ ಶೆಣೈ.
ಪ್ರಸ್ತುತವಾಗಿ ಪ್ರಿ-ಬುಕ್ಕಿಂಗ್ ಪ್ರಾರಂಭವಾಗಿದೆ. ಡಿಸೆಂಬರ್ ತಿಂಗಳಲ್ಲಿ ಗ್ರಾಹಕರ ವಾಹನವನ್ನು ಕೇವಲ 6 ಗಂಟೆಯಲ್ಲಿ ವಿದ್ಯುತ್ ಚಾಲಿತ ವಾಹನವನ್ನಾಗಿ ಪರಿವರ್ತನೆ ಮಾಡಲಿದ್ದೇವೆ ಅಂತಾರೆ ಸಚಿನ್.
ಸದ್ಯ ಕೇವಲ ಮೊಪೆಡ್ ವಾಹನಕ್ಕೆ ಈ ತಂತ್ರಜ್ಞಾನ ತಯಾರಾಗಿದೆ. ಬರುವ ದಿನಗಳಲ್ಲಿ ಬೈಕ್ಗಳಿಗೂ ಇದೇ ರೀತಿ ತಂತ್ರಜ್ಞಾನ ಸಿಗಲಿದೆ. ಇದಲ್ಲದೆ ಈ ಸಂಸ್ಥೆ ಹೈಬ್ರೀಡ್ ತಂತ್ರಜ್ಞಾನ ಕೂಡ ತಯಾರಿಸಿದೆ.
ಪೆಟ್ರೋಲ್ ಹಾಗೂ ವಿದ್ಯುತ್ ಬಳಸಿ ದ್ವಿಚಕ್ರ ವಾಹನ ಉಪಯೋಗಿಸಬಹುದು. ಹೈಬ್ರೀಡ್ ತಂತ್ರಜ್ಞಾನದ ಬಗ್ಗೆ ಹೆಚ್ವು ಮಾಹಿತಿ ನೀಡದ ಸಂಸ್ಥೆ, ಡಿಸೆಂಬರ್ ತಿಂಗಳಲ್ಲಿ ಇನ್ನು ಹೆಚ್ಚಿನ ಆಶ್ಚರ್ಯ ನೀಡಲಿದ್ದೇವೆ ಎಂದು ಹೇಳಿದೆ.
ವಿದ್ಯುತ್ ವಾಹನ ಪರಿವರ್ತನೆ ಹಾಗೂ ಆರ್ಟಿಒ ಕಾಗದ ಕೆಲಸದ ಜವಾಬ್ದಾರಿಯನ್ನ ಸಂಸ್ಥೆ ಹೊತ್ತಿದೆ. ಸಚಿನ್ ಶೆಣೈ ಹೇಳಿದ ಪ್ರಕಾರ ಇಂಧನ ವಾಹನ ಪ್ರತಿ ಲೀಟರ್ ಪೆಟ್ರೋಲ್ಗೆ ₹ 3.15 ಸರಾಸರಿ ವೆಚ್ಚ ಆಗಲಿದೆ.
ರೆಟ್ರೋ ಫಿಟ್ ಪ್ರತಿ ಚಾರ್ಜ್ ₹85 ಇದ್ದದ್ದು, ಈಗ ₹1.25 ಆಗಲಿದೆ ಎಂದು ಹೇಳುತ್ತಾರೆ. ಈ ಹೊಸ ಪ್ರಯತ್ನ ಏರುತ್ತಿರುವ ಇಂಧನ ದರಕ್ಕೆ ಪರಿಹಾರ ನೀಡಲಿದ್ಯಾ ಎಂದು ಕಾದು ನೋಡಬೇಕಿದೆ.