ಬೆಂಗಳೂರು: ಬ್ಯಾಂಕಿನ ಖಾತೆ, ಮೊಬೈಲ್ ನಂಬರ್ ಮತ್ತು ದೊಡ್ಡ ದೊಡ್ಡ ಕಂಪನಿಗಳ ವಹಿವಾಟುಗಳನ್ನ ಹ್ಯಾಕ್ ಮಾಡುತ್ತಿದ್ದ ಖದೀಮರು, ಇದೀಗ ಶಾಲಾ ಮಕ್ಕಳ ಪಾಠವನ್ನೂ ಸಹ ಬಿಟ್ಟಿಲ್ಲ. ಬೆಂಗಳೂರಿನ ಶಾಲೆಯೊಂದರಲ್ಲಿ ಜೂಮ್ ಆ್ಯಪ್ ಹ್ಯಾಕ್ ಮಾಡಿದ ಘಟನೆ ನಡೆದಿದೆ.
ಕೊರೊನಾ ಹಿನ್ನೆಲೆ, ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಆನ್ಲೈನ್ ಶಿಕ್ಷಣದ ಪರ - ವಿರೋಧ ನಡುವೆಯೂ 6 ನೇ ತರಗತಿಯಿಂದ 10ನೇ ತರಗತಿಯವರೆಗೂ ಖಾಸಗಿ ಶಾಲೆಗಳು ಆನ್ಲೈನ್ ಶಿಕ್ಷಣ ನೀಡುತ್ತಿದೆ. ಇದೇ ರೀತಿ, ಹೆಬ್ಬಾಳದ ಕೆಂಪಾಪುರ ಬಳಿಯ ಜೈನ್ ಹೆರಿಟೇಜ್ ಶಾಲೆಯೊಂದರಲ್ಲಿ ಜೂಮ್ ಆ್ಯಪ್ ಮೂಲಕ ವಿದ್ಯಾರ್ಥಿಗಳ ಪಾಠ ಕೇಳಿಸಿಕೊಳ್ಳುತ್ತಿದ್ದರು. ಇದೆ ವೇಳೆ, ಆನ್ಲೈನ್ ಕಿಡಿಗೇಡಿಗಳು ಈ ಆ್ಯಪ್ ಹ್ಯಾಕ್ ಮಾಡಿದ್ದಾರೆ.
ಕಳೆದ ತಿಂಗಳು ಮೇ.21 ರಂದು ಖಾಸಗಿ ಶಾಲೆಯು ಸುಮಾರು 12 ವಿದ್ಯಾರ್ಥಿಗಳಿಗೆ ಜೂಮ್ ಆ್ಯಪ್ ಐಡಿ ಮೂಲಕ ಅನ್ ಲೈನ್ ಕ್ಲಾಸ್ ಕಂಡಕ್ಟ್ ಮಾಡಿದ್ದರು. ಅದೇ ದಿನ ಮಧ್ಯಾಹ್ನ 2 ಗಂಟೆಯಿಂದ 2.45 ರವರೆಗೆ ನಡೆದ ತರಗತಿ ಪಾಠ ಆಲಿಸಿಕೊಳ್ಳುತ್ತಿದ್ದ 12 ವಿದ್ಯಾರ್ಥಿಗಳ ಪೈಕಿ ನಾಲ್ವರು ವಿದ್ಯಾರ್ಥಿಗಳ ಜೂಮ್ ಐಡಿ ಹ್ಯಾಕ್ ಮಾಡಿದ ಕಿರಾತಕರು, ತರಗತಿಯನ್ನು ಅಡ್ಡಿಪಡಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಈ ಸಂಬಂಧ ಶಾಲಾ ಪ್ರಾಂಶುಪಾಲರಾದ ಅರ್ಚನಾ ವಿಶ್ವನಾಥ್, ಸಿಐಡಿ ಸೈಬರ್ ವಿಭಾಗದ ಪೊಲೀಸರಿಗೆ ದೂರು ನೀಡಿದ್ದು, ಅವರ ದೂರಿನ ಅನ್ವಯ ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ 1ರಿಂದ 5ನೇ ತರಗತಿವರೆಗೆ ಅನ್ಲೈನ್ ಶಿಕ್ಷಣ ನಿಷೇಧಿಸಿದ್ದು, 6 ರಿಂದ 10ನೇ ತರಗತಿವರೆಗೂ ಆನ್ ಲೈನ್ ಶಿಕ್ಷಣ ಬೇಕಾ ಅಥವಾ ಬೇಡ್ವಾ ಎಂಬುದರ ಬಗ್ಗೆ ಸರ್ಕಾರ ತಜ್ಞರಿಗೆ ಹತ್ತು ದಿನದೊಳಗೆ ವರದಿ ನೀಡುವಂತೆ ಸೂಚನೆ ನೀಡಿದೆ. ಹೀಗಿದ್ದರೂ ಬಹುತೇಕ ಖಾಸಗಿ ಶಾಲೆಗಳಲ್ಲಿ ಆನ್ಲೈನ್ ಶಿಕ್ಷಣ ನಡೆಯುತ್ತಲೇ ಇದೆ.