ಬೆಂಗಳೂರು: ವಿಧಾನ ಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟನೆಗೆ ಮುಂದಾಗಿ ಅಮಾನತಾಗಿರುವ ಭದ್ರಾವತಿ ಶಾಸಕ ಸಂಗಮೇಶ್ಗೆ ಸಲಹೆ ಕೊಟ್ಟವರು ಯಾರು ಪ್ರಶ್ನೆಗೆ ಇದೀಗ ಉತ್ತರ ಲಭಿಸಿದೆ.
ಎಷ್ಟೇ ಪ್ರಯತ್ನಪಟ್ಟರೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮತ್ತ ಗಮನಹರಿಸುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದ ಸಂಗಮೇಶ್ಗೆ ಶರ್ಟ್ ನಿಕಾಲೋ ಸಂಗಣ್ಣ ಅಂತ ಸಲಹೆ ಕೊಟ್ಟಿದ್ದು ಮಾಜಿ ಸಚಿವ ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಎಂಬ ವಿಚಾರ ಶಾಸಕಾಂಗ ಸಭೆಯಲ್ಲಿ ತಿಳಿದುಬಂದಿದೆ.
ಪ್ರತಿಭಟನೆ ಮಾಡುತ್ತಿದ್ದ ಶಾಸಕ ಸಂಗಮೇಶ್ ಗೆ ಶರ್ಟ್ ಬಿಚ್ಚುವಂತೆ ಪ್ರೇರೇಪಿಸಿದ್ದು ಯಾರು? ಎಂಬ ಪ್ರಶ್ನೆಗೆ ಅಧಿಕೃತ ಉತ್ತರ ಲಭಿಸಿದ್ದು, ಶಾಸಕಾಂಗ ಸಭೆಯಲ್ಲಿ ಭಾಗವಹಿಸಿದ್ದ ಸಂಗಮೇಶ್ವರರನ್ನು ಕರೆಸಿ ಪಕ್ಷದ ರಾಜ್ಯ ನಾಯಕರು ಘಟನೆಯ ಮಾಹಿತಿ ಪಡೆದರು. ಸಂಗಮೇಶ್ ಪರವಾಗಿ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಹೋರಾಟಗಳ ಕುರಿತು ರೂಪುರೇಷೆ ಸಂದರ್ಭ ಘಟನೆಯ ಮಾಹಿತಿ ಪಡೆಯಲಾಯಿತು. ಸಿದ್ದರಾಮಯ್ಯ ವೇದಿಕೆ ಬಳಿ ಕರೆಸಿಕೊಂಡು ಸಂಗಮೇಶ್ ಜೊತೆ ಚರ್ಚೆ ನಡೆಸಿದರು.
ಈ ಸಂದರ್ಭ ವೇದಿಕೆಯಲ್ಲಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಬಳಿ ಸಂಗಮೇಶ್ ರನ್ನ ಕರೆಸಿಕೊಂಡು ಇನ್ನಷ್ಟು ಮಾಹಿತಿ ಪಡೆದರು. ಈ ಸಂದರ್ಭ ಅವರೊಂದಿಗೆ ಮಾತನಾಡಿದ ಸಂಗಮೇಶ್, ಶರ್ಟ್ ಬಿಚ್ಚಲು ಸಲಹೆ ನೀಡಿದ್ದು ಜಮೀರ್ ಅಹಮದ್ ಎಂದು ತಿಳಿಸಿದ್ದಾರೆ. ಕೇವಲ ಪ್ರತಿಭಟನೆ ಮಾಡಿದರೆ ಪ್ರಯೋಜನವಿಲ್ಲ ಶರ್ಟ್ ಬಿಚ್ಚಿದರೆ ಮಾತ್ರ ಅದಕ್ಕೊಂದು ಬಲ ಬರುತ್ತದೆ ಎಂಬ ಸಲಹೆಯನ್ನು ಸದನದಲ್ಲಿ ಜಮೀರ್ ನೀಡಿದ್ದರು. ಇದನ್ನ ಸಂಗಮೇಶ್ ಶಿರಸಾ ಪಾಲಿಸಿದ್ದರು. ಅದೇ ಮಾಹಿತಿಯನ್ನು ಶಾಸಕಾಂಗ ಸಭೆಗೆ ತಿಳಿಸಿದ್ದಾರೆ.
ಇದುವರೆಗೂ ಡಿ ಕೆ ಶಿವಕುಮಾರ್ ಅಥವಾ ರಮೇಶ್ ಕುಮಾರ್ ಅವರೇ ಈ ಸಲಹೆಯನ್ನು ಸಂಗಮೇಶ್ಗೆ ನೀಡಿದ್ದರು ಎಂದು ಕೆಲವರು ಆರೋಪಿಸಿದ್ದರು. ಒಂದಿಷ್ಟು ಮಂದಿ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಈ ರೀತಿಯ ಒಂದು ತೀರ್ಮಾನ ಆಗಿತ್ತು ಎಂದು ಬಣ್ಣಿಸಿದರು. ಆದರೆ, ವಸ್ತುಸ್ಥಿತಿ ಬೇರೆಯೇ ಆಗಿತ್ತು. ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರೇ ಖುದ್ದು ಈ ವಿಚಾರ ಪ್ರಸ್ತಾಪ ಮಾಡಿ ಸಂಗಮೇಶ್ ಗೆ ಆಗಿರುವ ಅನ್ಯಾಯದ ವಿರುದ್ಧ ನಾವೆಲ್ಲಾ ಒಟ್ಟಾಗಿ ಹೋರಾಟ ನಡೆಸಬೇಕು. ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳುವುದು ಬೇಡ ಎಂದು ತಿಳಿಸಿದ್ದರು ಎನ್ನಲಾಗಿದೆ. ಆದರೆ ಸದನದಲ್ಲಿ ಪ್ರತಿಭಟನೆಗೆ ಇಳಿದ ಸಂಗಮೇಶ್ ಏಕಾಏಕಿ ಶರ್ಟ್ ಬಿಚ್ಚಿದ್ದು ಯಾಕೆ ಎನ್ನುವ ಗೊಂದಲ ಬಹಳ ಜನರಲ್ಲಿ ಉಳಿದುಕೊಂಡಿತ್ತು. ಇದೀಗ ಶರ್ಟ್ ಬಿಚ್ಚಿದ ಘಟನೆ ಹಿಂದೆ ಜಮೀರ್ ಕೈಚಳಕ ಇದೆ ಎಂಬ ಸತ್ಯ ತಿಳಿದುಬಂದಿದೆ.
ಗದರಿಸಿದ ರಮೇಶ್ ಕುಮಾರ್:
ಸ್ಪೀಕರ್ ಆಗಿ ಎರಡು ಸಾರಿ ಕಾರ್ಯನಿರ್ವಹಿಸಿದ ಅನುಭವವುಳ್ಳ ಹಿರಿಯ ಸದಸ್ಯ ರಮೇಶ್ ಕುಮಾರ್ ಸಂಗಮೇಶ್ವರ್ ಅವರನ್ನು ಕರೆದು ಬುದ್ದಿ ಹೇಳಿದ್ದು, ಜಮೀರ್ ಹೇಳಿದ ಅಂತ ಪ್ಯಾಂಟ್ ಬಿಚ್ಚಬೇಡ ಮತ್ತೆ, ಅವನೆಲ್ಲಿ ಜಮೀರ್ ಬಂದಿಲ್ವಾ...? ಅವನ ಮಾತು ಕೇಳಿಕೊಂಡು ನೀನು....! ಎಂದು ಗದರಿಸಿ ಕಳುಹಿಸಿದ್ದಾರೆ.