ಬೆಂಗಳೂರು: ಸಣ್ಣ ವಿಚಾರಕ್ಕೆ ಆರಂಭವಾದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ನಿನ್ನೆ ತಡರಾತ್ರಿ ಚಿಕ್ಕಬಾಣವಾರದ ಪ್ರಾಂಗಣ ಫಂಕ್ಷನ್ ಹಾಲ್ ಬಳಿ ನಡೆದಿದೆ. ಅರುಣ್ (22) ಕೊಲೆಯಾದ ಯುವಕ. ಐವರು ಆರೋಪಿಗಳು ಅರುಣ್ನನ್ನು ಕಲ್ಲಿನಿಂದ ಹೊಡೆದು ತೀವ್ರವಾಗಿ ಥಳಿಸಿದ್ದು, ರಕ್ತಸ್ರಾವವುಂಟಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.
ಮೊಬೈಲ್ ಕಸಿಯಲು ಯತ್ನಿಸಿದ್ದಕ್ಕೆ ಕೊಲೆ ಶಂಕೆ ಆರೋಪಿಗಳು ಮಾದನಾಯಕನಹಳ್ಳಿಯ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದರ ಉದ್ಯೋಗಿಗಳಾಗಿದ್ದು, ಶುಕ್ರವಾರ ತಡರಾತ್ರಿ ಒಂದು ಗಂಟೆ ಸುಮಾರಿಗೆ ಘಟನಾ ಸ್ಥಳದಲ್ಲಿ ಫಂಕ್ಷನ್ ಹಾಲ್ ಬಳಿ ಕೆಲಸ ಮಾಡುತ್ತಿದ್ದರು. ಈ ವೇಳೆ ಕೊಲೆಗೀಡಾದ ಅರುಣ್ ತನ್ನ ಸ್ನೇಹಿತನ ಜತೆ ಬೈಕ್ನಲ್ಲಿ ಬಂದಿದ್ದಾನೆ.
ಅರುಣನು ಆರೋಪಿಗಳ ಬಳಿ ಇದ್ದ ಮೊಬೈಲ್ ಕಸಿದುಕೊಳ್ಳಲು ಮುಂದಾಗಿದ್ದಾನೆ. ಆರೋಪಿಗಳ ಪೈಕಿ ಒಬ್ಬ ಯುವಕನು ಅರುಣ ತಲೆಗೆ ಕಲ್ಲಿನಿಂದ ಜೋರಾಗಿ ಹೊಡೆದು ಕೆಳಕ್ಕೆ ಬೀಳಿಸಿದ್ದಾನೆ. ನೆಲಕ್ಕೆ ಬಿದ್ದಿದ್ದ ಅರುಣ್ಗೆ ತಕ್ಷಣ ಆರೋಪಿಗಳು ಹಿಗ್ಗಾಮುಗ್ಗಾ ಥಳಿಸಿದ್ದು, ನೋವು ತಾಳಲಾರದೇ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೂಡ ಸಾಕಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಅರುಣ್ ಹತ್ಯೆ ಅನುಮಾನಕ್ಕೆ ಕಾರಣವಾಗಿದೆ. ಸದ್ಯ ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಂಗಳೂರು ಕಾಲೇಜು ಫೆಸ್ಟ್ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ: ಓರ್ವ ವಿದ್ಯಾರ್ಥಿಯ ಹತ್ಯೆ
ಪಿಯು ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ 9 ವಿದ್ಯಾರ್ಥಿಗಳು ಆತ್ಮಹತ್ಯೆ:
ಅಮರಾವತಿ, ಆಂಧ್ರಪ್ರದೇಶ: ಪಿಯು ಪರೀಕ್ಷೆ ಫಲಿತಾಂಶ ಹೊರ ಬಿದ್ದಿದ್ದು, ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಫೇಲ್ ಆದ ಕಾರಣ ರಾಜ್ಯಾದ್ಯಂತ ಸುಮಾರು ಒಂಬತ್ತು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಇತ್ತಿಚೇಗೆ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಯಲ್ಲಿ ಪಾಸಾಗದ ಹಿನ್ನೆಲೆ ಸುಮಾರು ಒಂಬತ್ತು ವಿದ್ಯಾರ್ಥಿಗಳು ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಹೌದು, ಮಧ್ಯಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ, ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ವಿವಿಧೆಡೆ ಒಂಬತ್ತು ಇಂಟರ್ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎನ್ನಲಾಗ್ತಿದೆ.
ಚಿತ್ತೂರು ಜಿಲ್ಲೆಯ ಪುಂಗನೂರು ಮಂಡಲದ ಏಟವಕ್ಕಿಲಿಯ ವಿದ್ಯಾರ್ಥಿನಿ ಅನುಷಾ (17) ಇಂಟರ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಮನನೊಂದು ಗುರುವಾರ ಆತ್ಮಹತ್ಯೆ , ಚಿತ್ತೂರು ಜಿಲ್ಲೆಯ ಬೈರೆಡ್ಡಿಪಲ್ಲಿಯ ಕೃಷ್ಣಪ್ಪ ಅವರ ಪುತ್ರ ಬಾಬು (17) ಇಂಟರ್ ಎಂಪಿಸಿ ದ್ವಿತೀಯ ವರ್ಷದ ಗಣಿತದಲ್ಲಿ ತೇರ್ಗಡೆಯಾಗಿರಲಿಲ್ಲ. ಇದರಿಂದ ಮನನೊಂದ ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎನ್ಟಿಆರ್ ಜಿಲ್ಲೆಯ ನಂದಿಗಾಮದಲ್ಲಿ ಇಂಟರ್ ಪ್ರಥಮ ವರ್ಷದ ವಿದ್ಯಾರ್ಥಿ ಶೇಖ್ ಜಾನ್ ಸೈದಾ (16) ಗಣಿತದಲ್ಲಿ, ಭೌತಶಾಸ್ತ್ರದಲ್ಲಿ ಹಾಗೂ ರಸಾಯನಶಾಸ್ತ್ರದಲ್ಲಿ ಅತೀ ಕಡಿಮೆ ಮಾರ್ಕ್ಸ್ ಪಡೆದಿದ್ದರಿಂದ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೀಗಾಗಿ ರಾಜ್ಯಾದ್ಯಂತ ಸುಮಾರು ಒಂಬತ್ತು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ನಡೆದಿವೆ.
ಇದನ್ನೂಓದಿ:ಸಿಗರೇಟ್ ವಿಚಾರ: 8ನೇ ತರಗತಿ ಸ್ನೇಹಿತನನ್ನು ಕಲ್ಲಿನಿಂದ ಹೊಡೆದು ಕೊಂದ ಸಹಪಾಠಿಗಳು!