ನೆಲಮಂಗಲ: ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಪುರಾತನ ಗಂಗರ ಕಾಲದ ಆಂಜನೇಯ ದೇವಾಲಯ ಬಹಳ ದಿವಸದಿಂದ ಶಿಥಿಲವಾದ ಸ್ಥಿತಿಯಲ್ಲಿತ್ತು. ಲಾಕ್‌ಡೌನ್ ಸಮಯದಲ್ಲಿ ಗ್ರಾಮಕ್ಕೆ ಬಂದ ಯುವಕರು ಒಟ್ಟಾಗಿ ಗ್ರಾಮಸ್ಥರ ಮನವೊಲಿಸಿ ದೇವಾಲಯದ ಜೀರ್ಣೋದ್ದಾರ ಮಾಡಿ ದೇವಸ್ಥಾನದಲ್ಲಿ ಮತ್ತೆ ಘಂಟೆಯ ನಾದ ಮೊಳಗುವಂತೆ ಮಾಡಿದ್ದಾರೆ.
ಸರ್ಕಾರದ ಕಟ್ಟುನಿಟ್ಟಾದ ಆದೇಶವನ್ನು ಪಾಲಿಸುವ ಮೂಲಕ ದೇವಾಲಯ ಕಟ್ಟಡದ ಕಾಮಗಾರಿ ಮಾಡಲಾಗಿದೆ. ಗ್ರಾಮದಲ್ಲಿರುವ ಏಕೈಕ ಆಂಜನೇಯ ದೇವಾಲಯವನ್ನು ಸುಸ್ಥಿಯಲ್ಲಿಡಬೇಕೆಂಬ ಗ್ರಾಮಸ್ಥರ ಕನಸು ಯುವಕರ ಸಹಕಾರದಿಂದ ನನಸಾಗಿದೆ.
ದೇಶ ಬೇಗ ಕೊರೊನಾ ಮುಕ್ತವಾಗಲಿ ಎಂಬ ಸಂಕಲ್ಪದಲ್ಲಿ ಜೀರ್ಣೋದ್ಧಾರಗೊಂಡ ಆಂಜನೇಯ ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ನಡೆಸಲಾಯಿತು. ಜೊತೆಗೆ ಹಲವಾರು ಧಾರ್ಮಿಕ ವಿಧಿ ವಿಧಾನಗಳಾದ ಅಭಿಷೇಕ, ಅಲಂಕಾರ, ಬಲಿಹರಣ, ಪ್ರಸಾದ ವಿನಿಯೋಗ ಜರುಗಿದವು.