ಬೆಂಗಳೂರು: ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ಆರೋಗ್ಯ ಸಚಿವ ಸುಧಾಕರ್ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದರು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಮುಂದೆ ಯುವ ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಧರಣಿ ನಡೆಯಿತು. ಆರೋಗ್ಯ ಸಚಿವರ ಆರೋಗ್ಯ ತಪಾಸಣೆ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಚಿವರನ್ನು ಲೇವಡಿ ಮಾಡಿದರು.
225 ಶಾಸಕರ ಬಗ್ಗೆ ಅವಹೇಳನ ಮಾಡಿರುವ ಸಚಿವ ಸುಧಾಕರ್ ಮರ್ಯಾದಾ ಪುರುಷೋತ್ತಮ ಎಂದು ಹೇಳುವ ಮೂಲಕ ಶ್ರೀರಾಮಚಂದ್ರನಿಗೂ ಅಪಮಾನ ಮಾಡಿದ್ದಾರೆ. ಕೂಡಲೇ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಇಲ್ಲವಾದರೆ ಸಿಎಂ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ ಕಾರ್ಯಕರ್ತರು ಸುಧಾಕರ್ ವಿರುದ್ಧ ಘೋಷಣೆ ಕೂಗಿದರು. ಬೆಂಕಿಹಾಕಿ ಪೊರಕೆ ಹಿಡಿದು ವಿನೂತನ ಹೋರಾಟ ನಡೆಸಿದರು.
ಇದನ್ನು ಓದಿ: ಹಿರಿಯ ನಾಗರಿಕರಿಗೆ ಅಂಚೆ ಮತದಾನ ಕೋರಿ ಅರ್ಜಿ: ವಿಚಾರಣೆಗೆ ನಿರಾಕರಿಸಿದ ಹೈಕೋರ್ಟ್
ಕಾಂಗ್ರೆಸ್ ಮುಖಂಡ ಮನೋಹರ್ ಮಾತನಾಡಿ, ಸುಧಾಕರ್ಗೆ ಮತಿಭ್ರಮಣೆಯಾಗಿದೆ. 225 ಶಾಸಕರ ವಿರುದ್ಧ ಅವಹೇಳನ ಮಾಡಿದ್ದಾರೆ. ಸಂಗಮೇಶ್ ಶರ್ಟ್ ಬಿಚ್ಚಿದ್ದಕ್ಕೆ ಅಮಾನತು ಮಾಡಿದ್ರು, ಸ್ಪೀಕರ್ ಸೇರಿ ಎಲ್ಲರಿಗೂ ಸುಧಾಕರ್ ಅವಮಾನಿಸಿದ್ದಾರೆ. ಸುಧಾಕರ್ ಶಾಸಕಿಯರಿಗೆ ಅಗೌರವ ತೋರಿದ್ದಾರೆ. ಸಿಡಿ ಸುಧಾಕರ್ಗೆ ಭಯ ಶುರುವಾಗಿದೆ. ಹಾಗಾಗಿ ಬುದ್ಧಿ ಕಳೆದುಕೊಂಡು ಏನೇನೋ ಮಾಡ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕಿರು ನಾಟಕ ಪ್ರದರ್ಶನದ ಮೂಲಕ ಸಚಿವ ಹೇಳಿಕೆ ವ್ಯಂಗ್ಯವಾಡಿದ ಕಾಂಗ್ರೆಸ್ ನಾಯಕರು, ಪಾತ್ರಧಾರಿಗಳಿಂದ ವ್ಯಂಗ್ಯ ಭರಿತ ಡೈಲಾಗ್ಸ್ ಹೇಳಿಸಿದರು. ಇವರು ಅನಾರೋಗ್ಯ ಸಚಿವರು. ನಿಮಾನ್ಸ್ಗೆ ಸೇರಿಸಬೇಕು. ಆಪರೇಷನ್ ಕಮಲದಿಂದ ಮತಿ ಭ್ರಮಣೆ ಆಗಿದೆ. ಅಸ್ತವ್ಯಸ್ತ ಆಗಿದ್ದಾರೆ, ಆರೋಗ್ಯದಲ್ಲಿ ಸಮಸ್ಯೆಯಿದೆ. ಸಿಡಿ ವಿಚಾರದಲ್ಲಿ ಭಾಗಿಯಾಗಿ ಬುದ್ದಿ ಕಳೆದುಕೊಂಡಿದ್ದಾರೆ ಎಂದು ರೋಗಿ ಪಾತ್ರಧಾರಿ ಚೆಕ್ ಮಾಡ್ತಾ ಡೈಲಾಗ್ಸ್ ಹೇಳಿದ ಕೈ ಕಾರ್ಯಕರ್ತ ಎಲ್ಲರನ್ನೂ ನಗಿಸಿದರು.