ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ನಡೆಯುತ್ತಿರುವ ಆನ್ಲೈನ್ ಮತದಾನಕ್ಕೆ ಮೊದಲ ದಿನ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಮೊದಲ ದಿನದ ಮತದಾನ ಮುಕ್ತಾಯಕ್ಕೆ 59,418 ಮತಗಳು ದಾಖಲಾಗಿದೆ. ಒಟ್ಟು 6.5 ಲಕ್ಷ ಮಂದಿ ಮತದಾರರನ್ನು ಒಳಗೊಂಡಿರುವ ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಮೊದಲ ದಿನ ಕೆಲ ತಾಂತ್ರಿಕ ತೊಡಕು ಹಾಗೂ ಅರಿವಿನ ಕೊರತೆಯಿಂದಾಗಿ ಮತದಾನ ಕೊಂಚ ಕಡಿಮೆ ಆಗಿದೆ ಎನ್ನಲಾಗಿದೆ.
ಇಂದು ಒಟ್ಟು 12 ಜಿಲ್ಲೆಗಳಲ್ಲಿ ಮತದಾನವಾಗಿದೆ. 12 ಜಿಲ್ಲೆಯ ಒಟ್ಟು ಮತದಾರರ ಸಂಖ್ಯೆ 1,40,558 ಆಗಿತ್ತು. ಉಳಿದ ಜಿಲ್ಲೆಗಳಲ್ಲಿನ ಮತದಾನಕ್ಕೆ ಇನ್ನು ಎರಡು ದಿನ ಬಾಕಿ ಇದೆ. ಕಣದಲ್ಲಿ ಒಟ್ಟು 16 ಮಂದಿ ಅರ್ಹತೆ ಪಡೆದಿದ್ದರು. ಆದರೆ, ಮತದಾನಕ್ಕೆ ಒಂದು ದಿನ ಮುನ್ನ ಮಿಥುನ್ ರೈ ಕಣದಿಂದ ಹಿಂದೆ ಸರಿದ ಹಿನ್ನೆಲೆ 15 ಮಂದಿ ಉಳಿದುಕೊಂಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಮಂಜುನಾಥ್ ಗೌಡ, ಮೊಹಮದ್ ನಲಪಾಡ್, ರಕ್ಷಾ ರಾಮಯ್ಯ ಮುಂಚೂಣಿಯಲ್ಲಿದ್ದು, ಗೆಲುವಿನ ಫೇವರಿಟ್ ಅಭ್ಯರ್ಥಿಗಳಾಗಿದ್ದಾರೆ.
ಮತದಾನ ವಿವರ :
ಭಾನುವಾರ ಮತದಾನ ನಡೆದ 12 ಜಿಲ್ಲೆಗಳ ಪೈಕಿ ವಿವರ ಗಮನಿಸಿದಾಗ ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 12,182 ಮತದಾರರಿದ್ದು, ಶೇ. 53.63 ರಷ್ಟು ಅಂದರೆ 6,533 ಮಂದಿ ಮತದಾನ ಮಾಡಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ 26,942 ಮತದಾರರಿದ್ದು, ಶೇ.38.27 ರಷ್ಟು ಅಂದರೆ 10,310 ಮಂದಿ ಮತದಾನ ಮಾಡಿದ್ದಾರೆ. ಬೆಳಗಾವಿ ನಗರ ಜಿಲ್ಲೆಯಲ್ಲಿ 1062 ಮತದಾರರಿದ್ದು, 776 ಮಂದಿ ಮತದಾನ ಮಾಡಿದ್ದು, ಶೇ. 73.07ರಷ್ಟು ಮತದಾನವಾಗಿದೆ.
ಓದಿ : ಸಿಎಂ ಸ್ಥಾನದಿಂದ ಬಿಎಸ್ವೈ ಅವರನ್ನು ಕೆಳಗಿಳಿಸೋದು ಸತ್ಯ: ಸಿದ್ದರಾಮಯ್ಯ
ಬೆಳಗಾವಿ ಗ್ರಾಮಾಂತರ ಜಿಲ್ಲೆಯಲ್ಲಿ ಶೇ.46.15ರಷ್ಟು, ಬಳ್ಳಾರಿ ನಗರ ಜಿಲ್ಲೆಯಲ್ಲಿ ಶೇ.38.53ರಷ್ಟು, ಚಾಮರಾಜನಗರ ಜಿಲ್ಲೆಯಲ್ಲಿ ಶೇ.21.28ರಷ್ಟು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ. 40.26ರಷ್ಟು, ಚಿಕ್ಕೋಡಿಯಲ್ಲಿ ಶೇ. 37.06ರಷ್ಟು, ಚಿತ್ರದುರ್ಗದಲ್ಲಿ ಶೇ. 34.72ರಷ್ಟು, ಕೋಲಾರದಲ್ಲಿ ಶೇ. 54.61 ರಷ್ಟು, ಮೈಸೂರು ನಗರದಲ್ಲಿ ಶೇ.36.35 ಹಾಗೂ ಶಿವಮೊಗ್ಗದಲ್ಲಿ ಶೇ.40.15ರಷ್ಟು ಮತದಾನವಾಗಿದೆ.
ಬೆಳಗಾವಿ ನಗರ, ಬಾಗಲೋಟೆ, ಕೋಲಾರ ಜಿಲ್ಲೆಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ಕಡೆ ಶೇ.50ಕ್ಕಿಂತ ಕಡಿಮೆ ಮತದಾನವಾಗಿದ್ದು, ಯುವ ಕಾಂಗ್ರೆಸ್ ಮತದಾರರ ನಿರುತ್ಸಾಹವನ್ನು ಎತ್ತಿ ತೋರಿಸಿದೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಾಕಷ್ಟು ನಿರೀಕ್ಷೆಯಿಂದ ನಡೆಸುತ್ತಿರುವ ಈ ಚುನಾವಣೆಯಲ್ಲಿ ಇಷ್ಟೊಂದು ನೀರಸ ಮತದಾನ ಆಗಿರುವುದು ವಿಪರ್ಯಾಸ.