ಬೆಂಗಳೂರು: ಸ್ನೇಹಿತನೊಂದಿಗೆ ಬೈಕಿನಲ್ಲಿ ಹೋಗುವಾಗ ಯುವತಿಯೊಬ್ಬಳು ಆಯತಪ್ಪಿ ಬಿದ್ದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಕ್ಯಾಂಟರ್ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಹೆಬ್ಬಾಳದ ಭದ್ರಪ್ಪ ಲೇಔಟ್ ನಿವಾಸಿಯಾಗಿರುವ ಮಹಶ್ರೀ ಮೃತಪಟ್ಟಿರುವ ದುದೈರ್ವಿಯಾಗಿದ್ದಾರೆ. ಮಲ್ಲೇಶ್ವರಂ ಸರ್ಕಾರಿ ಕಾಲೇಜಿನಲ್ಲಿ ಮೃತ ಮಹಶ್ರೀ ವ್ಯಾಸಂಗ ಮಾಡುತ್ತಿದ್ದಳು. ಟೆಕ್ಸ್ಟೈಲ್ಸ್ ಅಂಗಡಿಯೊಂದರಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡಿದ್ದರು.
ಇಂದು ಬರ್ತ್ ಡೇ ಇದ್ದಿದ್ದರಿಂದ ಮನೆಯಲ್ಲಿಯೇ ಇರು ಎಂದು ಕುಟುಂಬಸ್ಥರು ಹೇಳಿದ್ದರು. ಪೋಷಕರು ಮಾತು ಕೇಳದೆ ಕೆಲಸಕ್ಕೆ ಹೋಗುತ್ತೇನೆ ಎಂದು ಹಠ ಮಾಡಿದ್ದಳಂತೆ. ಹೀಗಾಗಿ ಆಕೆಯ ಚಿಕ್ಕಪ್ಪ ಬಸ್ ಸ್ಟ್ಯಾಂಡ್ವರೆಗೂ ಜೊತೆಯಲ್ಲೇ ಹೋಗಿ ಬಿಟ್ಟು ಬಂದಿದ್ದರಂತೆ.
ಬಳಿಕ ಅಲ್ಲಿಂದ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಭದ್ರಪ್ಪ ಲೇಔಟ್ ಬಳಿಯ ಫ್ಲೈ ಓವರ್ನಲ್ಲಿ ಬೈಕಿನಲ್ಲಿ ಹೋಗುವಾಗ ಯುವತಿ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ. ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕ್ಯಾಂಟರ್ ವಾಹನ ಆಕೆಯ ತಲೆ ಮೇಲೆ ಹರಿದಿದ್ದರಿಂದ ಸ್ಥಳದಲ್ಲೇ ರಕ್ತಸ್ರಾವಗೊಂಡು ಸಾವನ್ನಪ್ಪಿದ್ದಾಳೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಹೆಬ್ಬಾಳ ಟ್ರಾಫಿಕ್ ಪೊಲೀಸರು ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡು ಕ್ಯಾಂಟರ್ ಚಾಲಕ ಹಾಗೂ ಮೃತ ಯುವತಿ ಸ್ನೇಹಿತನನ್ನು ವಿಚಾರಣೆಗೊಳಪಡಿಸಿದ್ದಾರೆ.