ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಪುಸಲಾಯಿಸಿ ಬೈಕ್ ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿರುವ ಆರೋಪದಡಿ ಇಬ್ಬರು ಆರೋಪಿಗಳನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ಅಕಿಲೇಶ್ ಹಾಗೂ ದೀಪು ಬಂಧಿತ ಆರೋಪಿಗಳು. 25 ವರ್ಷದ ಯುವತಿ ಮೇಲೆ ಆತ್ಯಾಚಾರ ಮಾಡಿದ್ದಾರೆ. ಈ ಸಂಬಂಧ ದೂರು ದಾಖಲಾದ ಹಿನ್ನೆಲೆ ಅಲರ್ಟ್ ಆದ ಪೊಲೀಸರು ಆರೋಪಿಗಳನ್ನ ಹೆಡೆಮುರಿಕಟ್ಟಿದ್ದಾರೆ.
ಆಗಸ್ಟ್ 31ರಂದು ಈಜಿಪುರ ಬಳಿಯಿರುವ ನಿವೇಶನ ನೋಡಿಕೊಂಡು ಸುಮಾರು 5 ಗಂಟೆಗೆ ವಾಪಸ್ ಬರುವ ಸಂದರ್ಭದಲ್ಲಿ ಇಬ್ಬರು ಯುವಕರು ಯುವತಿಯನ್ನ ಫಾಲೋ ಮಾಡಿಕೊಂಡು ಬಂದಿದ್ದರು. ಅವರಿಂದ ತಪ್ಪಿಸಿಕೊಂಡು ಚರ್ಚ್ ಬಳಿ ಬರುತ್ತಿದ್ದಂತೆ ಎರಡು ಬೈಕ್ ನಲ್ಲಿ ಬಂದ ಅಕಿಲೇಶ್ ಹಾಗೂ ದೀಪು ಯುವತಿಯನ್ನ ನಮ್ಮ ಏರಿಯಾದವರಲ್ವಾ ಡ್ರಾಪ್ ಕೊಡುತ್ತೇನೆ ಬನ್ನಿ ಎಂದು ಬಲವಂತವಾಗಿ ಕೂರಿಸಿಕೊಂಡಿದ್ದಾರೆ.
ಮುಖ ಪರಿಚಯವಿದ್ದಿದ್ದರಿಂದ ಯುವತಿ ಅಷ್ಟೇನೂ ವಿರೋಧ ವ್ಯಕ್ತಪಡಿಸದೇ ಅವರ ಜೊತೆ ತೆರಳಿದ್ದಾರೆ. ನಂತರ ಹುಸ್ಕೂರಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಊಟ ಮಾಡಿಸಿ ನಂತರ ಕಂಠ ಪೂರ್ತಿ ಬಲವಂತವಾಗಿ ಕುಡಿಸಿದ್ದಾರೆ. ಇದಾದ ಮೇಲೆ ಆಕೆಯನ್ನ ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರ ಮಾಡಿ ಪರಾರಿಯಾಗಿದ್ದಾರೆ.
ಯುವತಿ ಬೆಳಗಿನವರೆಗೂ ಪೊದೆಯೊಂದರಲ್ಲಿ ಅವಿತು ಬೆಳಗಿನ ಜಾವ ಅಲ್ಲೆ ಇದ್ದ ಮನೆಯವರ ಸಹಾಯದಿಂದ ಬಟ್ಟೆ ಧರಿಸಿ ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ.
ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಅನುಚಿತ ವರ್ತನೆ: ಪ್ರತಿರೋಧಿಸಿದ ಮಹಿಳೆಯನ್ನು ಕೆಳಗೆ ನೂಕಿದ ಕಿರಾತಕ