ಬೆಂಗಳೂರು: ಕೇವಲ ಒಂದು ಸಾವಿರ ರೂಪಾಯಿಗಾಗಿ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಅನುಮಾನಾಸ್ಪದ ಸಾವು ಎನ್ನಲಾಗುತ್ತಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ನಗರದ ಕೋಣನಕುಂಟೆಯಲ್ಲಿ ನಡೆದ ಈ ಪ್ರಕರಣದಲ್ಲಿ ಕೊಲೆ ನಡೆದಿರುವುದು ವೈದ್ಯರು ನೀಡಿದ ಮರಣೋತ್ತರ ಪರೀಕ್ಷೆ ವರದಿಯಿಂದ ಬಯಲಿಗೆ ಬಂದಿದೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಘಟನೆ ಹಿನ್ನೆಲೆ:
ಮೃತ ಮಂಜುನಾಥ್ ಮತ್ತು ಆರೋಪಿ ಆಕಾಶ್ ಇಬ್ಬರು ಸ್ನೇಹಿತರು. ಪ್ಲಂಬಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತೀಚೆಗೆ ಇಬ್ಬರಿಗೂ ಸಂಬಳವೂ ಬಂದಿತ್ತು. ಆದರೆ 1,000 ರೂ. ಹೆಚ್ಚುವರಿ ಹಣಕ್ಕಾಗಿ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ದೊಣ್ಣೆ ಹಾಗೂ ಕೈಯಿಂದ ಮಂಜುನಾಥ್ನಿಗೆ ಸ್ನೇಹಿತ ಆಕಾಶ್ ಥಳಿಸಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಂಜುನಾಥ್ ಆಸ್ಪತ್ರೆಗೆ ದಾಖಲಾಗಿದ್ದು, ತನಗೆ ಅಪಘಾತವಾಗಿದೆ ಎಂದು ವೈದ್ಯರ ಮುಂದೆ ಕಥೆ ಕಟ್ಟಿದ್ದ. ಆದರೆ ದುರುದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದ. ಬಳಿಕ ಈ ಕುರಿತು ಕೋಣನಕುಂಟೆ ಠಾಣೆಯಲ್ಲಿ 174(c) ಅಡಿಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿತ್ತು.
ಮರ್ಡರ್ ಮಿಸ್ಟರಿ ಬಯಲು:
ಆದರೆ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಮಂಜುನಾಥ್ನಿಗೆ ಅಪಘಾತದಿಂದ ಗಾಯವಾಗಿಲ್ಲ, ಬದಲಿಗೆ ಹಲ್ಲೆಗೆ ಸಂಬಂಧಿಸಿದ ಗಾಯಗಳು ಎಂದು ವರದಿ ನೀಡಿದ್ದರು. ಬಳಿಕ ಈ ಕುರಿತು ತನಿಖೆ ನಡೆಸಿದಾಗ ಘಟನೆಗೂ ಮುನ್ನ ಮಂಜುನಾಥ್ ಹಾಗೂ ಆರೋಪಿ ಆಕಾಶ್ ನಡುವೆ ಗಲಾಟೆಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತ ಆಕಾಶ್ ಕೂಡ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಸಂಪೂರ್ಣ ತನಿಖೆಯ ಬಳಿಕ ಕೋಣನಕುಂಟೆ ಪೊಲೀಸರು ಅನುಮಾನಾಸ್ಪದ ಸಾವು ಬದಲು 302ರಡಿ ಪ್ರಕರಣ ದಾಖಲಿಸಿ ಆರೋಪಿ ಆಕಾಶ್ನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆರಾಯಿನ್ ಮಾರಾಟ: ರಾಜಸ್ಥಾನ ಮೂಲದ ವ್ಯಕ್ತಿ ಬಂಧನ