ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಕಾಂಗ್ರೆಸ್ ಯುವ ನಾಯಕರು ಪ್ರತಿಭಟನೆ ಮೂಲಕ ಖಂಡಿಸಿದರು.
ನಗರದ ರೇಸ್ ಕೋರ್ಸ್ ರಸ್ತೆ ಕಾಂಗ್ರೆಸ್ ಭವನದಲ್ಲಿ ನಗರ ಯುವ ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರಹಾಕಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮನೋಹರ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇಡಿನ ರಾಜಕಾರಣ ಮಾಡುತ್ತಿವೆ. ಪಕ್ಷ ಸಂಘಟನೆಯಲ್ಲಿ ನಿಷ್ಠಾವಂತರಾಗಿ ತೊಡಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಚುನಾವಣೆ ಸಂದರ್ಭದಲ್ಲಿ ದಾಳಿ ನಡೆಸುವ ಮೂಲಕ ಧೃತಿಗೆಡಿಸುವ ಕಾರ್ಯ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಅನಗತ್ಯವಾಗಿ ತನ್ನ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಭ್ರಷ್ಟಾಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬ ಸದಸ್ಯರ ಮೇಲೆ ದಾಳಿ ನಡೆಯಲಿ. ದೇಶವನ್ನು ಲೂಟಿ ಮಾಡಿರುವವರು ಇಂದು ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಮೇಲಿನ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.