ಬೆಂಗಳೂರು: ದೇಶದ ಮೋಸ್ಟ್ ವಾಂಟೆಂಟ್ ಡಾನ್, ಅಂಡರ್ ವರ್ಲ್ಡ್ ಡಾನ್ ರವಿಪೂಜಾರಿಯನ್ನು ಬೆಂಗಳೂರಿಗೆ ಕರೆತರುವಲ್ಲಿ ಕರ್ನಾಟಕ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ..
ರವಿಪೂಜಾರಿಯನ್ನು ಏರ್ ಫ್ರಾನ್ಸ್ ವಿಮಾನದಿಂದ ನೇರವಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಸಿ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ನಿನ್ನೆ ತಡರಾತ್ರಿ ಮಡಿವಾಳ ಎಫ್ಎಸ್ಎಲ್ ಇಂಟಾರಗೇಷನ್ ಕಚೇರಿಗೆ ಕರೆದೊಯ್ದಿದ್ದಾರೆ. ಕಳೆದ 20 ವರ್ಷಗಳಿಂದ ಇದೇ ರವಿ ಪೂಜಾರಿ ದೇಶ ಬಿಟ್ಟು ಓಡಿಹೋಗಿದ್ದ.
ಉಡುಪಿ ಮೂಲದವನು: ಉಡುಪಿ ಮೂಲದ ಮಲ್ಪೆಯವನಾಗಿದ್ದ ರವಿಪೂಜಾರಿ ಕನ್ನಡ, ತುಳು, ಇಂಗ್ಲಿಷ್ ಮಾತನಾಡುತ್ತಾನೆ. ಅರ್ಧದಲ್ಲೇ ಶಾಲಾ ಶಿಕ್ಷಣ ಮೊಟಕುಗೊಳಿಸಿ 1990 ರಲ್ಲೇ ಮುಂಬೈ ಸೇರಿದ್ದ. ಈತನಿಗೆ ಹೆಂಡತಿ, ಇಬ್ಬರು ಪುತ್ರಿ ಹಾಗೂ ಪುತ್ರ ಇದ್ದಾನೆ. ಕೆಲ ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಮತ್ತೊಂದು ಮದುವೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮುಂಬೈನಿಂದ ದುಬೈಗೆ: ಮುಂಬೈನ ಅಂಧೇರಿಯಲ್ಲಿ ವಾಸವಾಗಿದ್ದ ಪೂಜಾರಿ ಛೋಟಾ ಶಕೀಲ್ ಗ್ಯಾಂಗ್ ಜೊತೆ ಗುರುತಿಸಿಕೊಂಡಿದ್ದ. ಸ್ಥಳೀಯ ರೌಡಿ ಹತ್ಯೆ ನಂತರ ಮೊದಲ ಬಾರಿಗೆ ರವಿ ಪೂಜಾರಿ ಹೆಸರು ಕೇಳಿಬಂದಿತ್ತು. ಭೂಗತ ಲೋಕದಲ್ಲಿದ್ದುಕೊಂಡು ಅಪರಾಧ ಪ್ರಕರಣಗಳಲ್ಲಿ ತೊಡಗಿದ್ದ ರವಿ ಪೂಜಾರಿ ಅಕ್ರಮವಾಗಿ ಕೊಟ್ಯಂತರ ರೂ. ಸಂಪಾದಿಸಿ ಮುಂಬೈನಿಂದ ದುಬೈಗೆ ಹಾರಿದ್ದ. 2003ರಲ್ಲಿ ಬಿಲ್ಡರ್ ಸುರೇಶ್ ವಾಧ್ವಾ ಹತ್ಯೆಗೆ ಯತ್ನಿಸಿದ್ದ. 2005ರಲ್ಲಿ ವಕೀಲ ಮಜೀದ್ ಮೆಮೊನ್ ಹತ್ಯೆ ಮಾಡಿದ ಆರೋಪ ಈತನ ಮೇಲಿದೆ.
ಎಷ್ಟು ಪ್ರಕರಣಗಳು?: ರವಿ ಪೂಜಾರಿ ವಿರುದ್ಧ ಬೆಂಗಳೂರಿನಲ್ಲಿ 39, ಮಂಗಳೂರು 36, ಉಡುಪಿ 11, ಮೈಸೂರು, ಹುಬ್ಬಳ್ಳಿ-ಧಾರವಾಡ, ಕೋಲಾರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ. ಪೂಜಾರಿ ವಿರುದ್ಧ ಮುಂಬೈ ಪೊಲೀಸರು ಒಟ್ಟು 49 ಪ್ರಕರಣಗಳನ್ನು ದಾಖಲಿಸಿದ್ದು, 26 ಪ್ರಕರಣಗಳು ಕಠಿಣವಾದ ಮಹಾರಾಷ್ಟ್ರ ನಿಯಂತ್ರಣ ಸಂಘಟಿತ ಅಪರಾಧ ಕಾಯ್ದೆಯಡಿಯಲ್ಲಿವೆ.
ಹಫ್ತಾ ವಸೂಲಿ ಪ್ರಮುಖ ದಂಧೆ: ಹಫ್ತಾ ವಸೂಲಿ ಮಾಡುವುದೇ ಈತನ ದಂಧೆಯಾಗಿತ್ತು. ರಾಜ್ಯದ ಉದ್ಯಮಿಗಳು, ರಾಜಕಾರಣಿಗಳು ಈತನ ಟಾರ್ಗೆಟ್ ಆಗಿದ್ದರು. ದೂರದ ಸೆನೆಗಲ್ನಲ್ಲಿ ಇದ್ದುಕೊಂಡೇ ದೇಶದಲ್ಲಿ ತನ್ನ ಕಾರ್ಯ ಚಟುವಟಿಕೆ ನಡೆಸುತ್ತಿದ್ದ.
ಬೆಂಗಳೂರು ಪೊಲೀಸರ ಯಶಸ್ಸು: ಎರಡು ದಶಕಗಳ ಹಿಂದೆ ದೇಶ ಬಿಟ್ಟು ಪರಾರಿಯಾಗಿದ್ದ ಈತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ನಡುವೆ ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳ ನೀಡಿದ ಮಾಹಿತಿ ಮೇರೆಗೆ ಕಳೆದ ವರ್ಷ 2019 ಜ.19 ರಂದು ಸೆನೆಗಲ್ ಪೊಲೀಸರು ಬಂಧಿಸಿದ್ದರು. ಆದರೆ ಭಾರತಕ್ಕೆ ಆರೋಪಿಯನ್ನು ಹಸ್ತಾಂತರಿಸಲು ಕಾನೂನು ಸಮಸ್ಯೆ ಎದುರಾಗಿತ್ತು. ಅಂತಿಮವಾಗಿ ಕಾನೂನು ಹೋರಾಟ ಪ್ರಕ್ರಿಯೆ ಮುಗಿಸಿಕೊಂಡು ದೇಶಕ್ಕೆ ಕರೆತರುವಲ್ಲಿ ರಾಜ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.