ಬೆಂಗಳೂರು: ಧಾರವಾಡ ಜಿ.ಪಂ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.
ಈ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿದ್ದು, ಸ್ಥಳೀಯ ರಾಜಾಕಾರಣಿಗಳ ಕೈವಾಡದ ಅನುಮಾನದ ಹಿನ್ನೆಲೆಯಲ್ಲಿ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿ ಸಾಕ್ಷ್ಯಾಧಾರಗಳ ಸಂಗ್ರಹದಲ್ಲಿ ತನಿಖಾ ಸಂಸ್ಥೆ ತೊಡಗಿದೆ. ಇತ್ತೀಚೆಗೆ ಹಾವೇರಿ ಎಎಸ್ಪಿಯನ್ನು ಕೂಡ ತನಿಖೆಗೆ ಒಳಪಡಿಸಲಾಗಿದ್ದು, ನಿನ್ನೆ ಹುಬ್ಬಳ್ಳಿ-ಧಾರವಾಡ ನಗರದ ಮಾಜಿ ಪೊಲೀಸ್ ಕಮಿಷನರ್ ಪಾಂಡುರಂಗ ಎಚ್.ರಾಣೆ ಅವರಿಗೆ ಬೆಂಗಳೂರಿನ ಹೆಬ್ಬಾಳದ ಗಂಗಾ ನಗರದ ಬಳಿಯಿರುವ ಸಿಬಿಐ ಕಚೇರಿಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ಅವರು ವಿಚಾರಣೆಗೆ ಹಾಜರಾಗಿದ್ದಾರೆ.
ಯೋಗೀಶ್ ಗೌಡ ಕೊಲೆ ನಡೆದ ಸಂದರ್ಭ ಹುಬ್ಬಳ್ಳಿ-ಧಾರವಾಡ ಕಮಿಷನರ್ ಯಾರಾಗಿದ್ದರು?, ಪ್ರಕರಣ ಕುರಿತು ಏನೆಲ್ಲಾ ಕ್ರಮ ಕೈಗೊಳ್ಳಲಾಗಿತ್ತು?, ಈ ಘಟನೆ ಸಂಬಂಧ ಯಾವೆಲ್ಲಾ ಸಾಕ್ಷ್ಯಾಧಾರಗಳ ಪತ್ತೆಯಾಗಿತ್ತು? ಎಂಬುದರ ಕುರಿತು ಪೊಲೀಸ್ ಅಧಿಕಾರಿಯನ್ನು ತನಿಖಾಧಿಕಾರಿಗಳು ಪ್ರಶ್ನಿಸಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಸಿಬಿಐ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಸ್ಥಳೀಯ ಪೊಲೀಸರು ಕೆಲ ಅಮಾಯಕರನ್ನು ಬಂಧಿಸಿದ್ದಾಗಿ ತಿಳಿಸಿದ್ದಾರೆ. ಹೀಗಾಗಿ ಸಿಬಿಐ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿದ್ದೇಕೆ?, ಯಾರಾದರೂ ರಾಜಕಾರಣಿಗಳ ಕೈವಾಡ ಅಥವಾ ಒತ್ತಡ ಇದೆಯಾ? ಎಂಬ ಹಲವು ಪ್ರಶ್ನೆಗಳನ್ನು ವಿಚಾರಣೆ ವೇಳೆ ಕೇಳಲಾಗಿದೆ.