ಬೆಂಗಳೂರು: ಎತ್ತಿನಹೊಳೆ ಯೋಜನೆಯ ಭೈರಗೊಂಡ್ಲು ಜಲಾಶಯದ ಸಂಗ್ರಹಣಾ ಸಾಮರ್ಥ್ಯವನ್ನು 5.78 ಟಿಎಂಸಿ ಯಿಂದ 2 ಟಿಎಂಸಿವರೆಗೆ ಕಡಿತಗೊಳಿಸುವ ಪರ್ಯಾಯ ಪ್ರಸ್ತಾವನೆಯಿಂದ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಯ ಮೇಲೆ ಉಂಟಾಗುವ ಭೀಕರ ಪರಿಣಾಮಗಳ ಕುರಿತು ಮಾಜಿ ಸಿಎಂ ಹೆಚ್ಡಿಕೆ ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲ ಈ ಸಂಬಂಧದ ಪ್ರಸ್ತಾವನೆಯನ್ನು ಕೂಡಲೇ ಕೈಬಿಡುವಂತೆ ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಹೆಚ್ ಡಿಕೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದ ಸಾರಾಂಶ: ' ಎತ್ತಿನಹೊಳೆ ಯೋಜನೆಯ ನಿರ್ಮಾಣ ಕಾರ್ಯವು 2012 ರಿಂದ ಜಾರಿಯಲ್ಲಿದ್ದು, ಇದುವರೆಗೆ ಸುಮಾರು 8,200 ಕೋಟಿ ರೂ.ಗಳು ವೆಚ್ಚವಾಗಿರುತ್ತದೆ. ಯೋಜನೆಯ ಪ್ರಮುಖ ಅಂಗವಾದ ಭೈರಗೊಂಡ್ಲು ಜಲಾಶಯದವರೆಗೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಸದರಿ ಅಣೆಕಟ್ಟು ಕಾಮಗಾರಿಯನ್ನು ಭೂಸ್ವಾಧೀನ ಸಮಸ್ಯೆಗಳಿಂದಾಗಿ ಪ್ರಾರಂಭ ಮಾಡಲಾಗದೇ ಸುಮಾರು 31/2 ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುತ್ತದೆ. ಈ ಸಂದರ್ಭದಲ್ಲಿ ತಮ್ಮ ಗಮನಕ್ಕೆ ಬಹು ಮುಖ್ಯವಾದ ಅಂಶಗಳನ್ನು ತರಬಯಸುತ್ತೇನೆ.

ಎತ್ತಿನಹೊಳೆ ಯೋಜನೆಯ ಮೂಲ ಉದ್ದೇಶ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಪೂರೈಸುವುದು ಮತ್ತು ಕೆರೆಗಳನ್ನು ತುಂಬಿಸುವುದು ಆಗಿರುತ್ತದೆ.
ಎತ್ತಿನಹೊಳೆ ಮೂಲ ಸ್ಥಳದಲ್ಲಿ ಸದಾಕಾಲ ವಿಶ್ವಾಸಾರ್ಹ (Perennial and dependable) ಹರಿವಿನ ಕೊರತೆಯಿಂದಾಗಿ, ದೇವರಾಯನದುರ್ಗದ ಸಮೀಪ 10 ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಿಸಿ, ಎತ್ತಿನಹೊಳೆಯಿಂದ ನೀರನ್ನು ಮೇಲಕ್ಕೆತ್ತಿ ಗುರುತ್ವಾಕರ್ಷಣಾ ಕಾಲುವೆಯ ಮುಖಾಂತರ ಜಲಾಶಯವನ್ನು ತುಂಬಿಸಿ, ನಂತರದಲ್ಲಿ ಜಲಾಶಯದಿಂದ ನೀರನ್ನು ಪಂಪ್‌ಗಳ ಮೂಲಕ ಮೇಲಕ್ಕೆತ್ತಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಹರಿಸಲು ಮೂಲತಃ ಯೋಜಿಸಲಾಗಿತ್ತು.

ಆದರೆ, ಈ ಜಲಾಶಯದಿಂದ ವನ್ಯಭೂಮಿ ಮುಳುಗಡೆಯಾಗಲಿದ್ದು, ಇದನ್ನು ಸ್ವಾಧೀನಪಡಿಸಿಕೊಳ್ಳಲು ಉದ್ಭವಿಸಿದ ಸಮಸ್ಯೆಯಿಂದಾಗಿ, ದೇವರಾಯನದುರ್ಗ ಜಲಾಶಯದ ಬದಲಿಗೆ ಕೊರಟಗೆರೆ ತಾಲ್ಲೂಕಿನ ಭೈರಗೊಂಡ್ಲು ಸಮೀಪ 5.78 ಟಿಎಂಸಿ ಜಲಾಶಯವನ್ನು ನಿರ್ಮಿಸಲು ಉದ್ದೇಶಿಸಿ 2014ರಲ್ಲಿ ಅನುಮೋದನೆ ನೀಡಲಾಯಿತು.
ಇಲ್ಲಿಯೂ ಕೂಡ ಕೊರಟಗೆರೆ ಜಮೀನು ಮಾಲೀಕರು ಭೂಸ್ವಾಧೀನ ಪ್ರಕ್ರಿಯೆಗೆ ತೀವ್ರ ವಿರೋಧ ನೀಡುತ್ತಲಿರುವುದರಿಂದ ಈ ಅಣೆಕಟ್ಟೆಯ ಕಾಮಗಾರಿಯನ್ನು ಇನ್ನೂವರೆಗೆ ಪ್ರಾರಂಭಿಸಲಾಗಿಲ್ಲ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ನೀಡುವ ಪರಿಹಾರ ಧನದಂತೆಯೇ ತಮಗೂ ಪರಿಹಾರ ನೀಡಬೇಕೆಂದು ಕೊರಟಗೆರೆ ಭೂಮಾಲೀಕರ ಬೇಡಿಕೆಯಾಗಿರುತ್ತದೆ. ಅವರ ಬೇಡಿಕೆಯನ್ನು ಈಡೇರಿಸಿದಲ್ಲಿ ಸರ್ಕಾರಕ್ಕೆ 319 ಕೋಟಿ ರೂ. ಅಧಿಕ ವೆಚ್ಚವಾಗಲಿದೆ ಎಂಬುದು ಸರ್ಕಾರದ ವಾದವಾಗಿರುತ್ತದೆ'
'ಈ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ, ಭೈರಗೊಂಡ್ಲು ಜಲಾಶಯದ ಸಾಮರ್ಥ್ಯವನ್ನು 5.78 ಟಿಎಂಸಿಯಿಂದ 2 ಟಿಎಂಸಿಗೆ ಇಳಿಸಿ, ಈ ಜಲಾಶಯವನ್ನು ತುಂಬಿಸಿ ನಂತರ ಮೇಲಕ್ಕೆತ್ತುವ ಬದಲು, ಗುರುತ್ವಾಕರ್ಷಣೆ ತೆರೆದ ಕಾಲುವೆಯಿಂದಲೇ ನೇರವಾಗಿ ಪಂಪ್‌ಗಳ ಮುಖಾಂತರ ಮೇಲಕ್ಕೆತ್ತಿ ಸದರೀ ಜಿಲ್ಲೆಗಳಿಗೆ ನೀರು ಹರಿಸಬಹುದೆಂದು ವಿಶ್ವೇಶ್ವರಯ್ಯ ಜಲ ನಿಗಮವು ತೀರ್ಮಾನಿಸಿ ಈ ಪರ್ಯಾಯ ಪ್ರಸ್ತಾವನೆಯನ್ನು ಮರು ಪರಿಷ್ಕೃತ ಅಂದಾಜಿನಲ್ಲಿ ಅಳವಡಿಸಿರುವುದಾಗಿ ತಿಳಿದು ಬಂದಿರುತ್ತದೆ.

23,251 ಕೋಟಿ ರೂ. ಮೊತ್ತದ ಮರು ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡುವ ಪ್ರಕ್ರಿಯೆಯು ಸರ್ಕಾರದಲ್ಲಿ ಅಂತಿಮ ಘಟ್ಟದಲ್ಲಿರುವುದಾಗಿಯೂ ತಿಳಿದು ಬಂದಿರುತ್ತದೆ. ಈ ರೀತಿ ಪದೇ ಪದೆ ಯೋಜನೆಯ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಿ, ಜಲಾಶಯದ ಸಂಗ್ರಹಣಾ ಸಾಮರ್ಥ್ಯವನ್ನು ತೀವ್ರವಾಗಿ ತೀರ್ಮಾನದಿಂದಾಗಿ ಕಡಿತಗೊಳಿಸುವ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನತೆಗೆ ಈ ಯೋಜನೆಯ ಬಗ್ಗೆ ವಿಶ್ವಾಸವೇ ಇಲ್ಲದಂತಾಗಿದ್ದು, ಈ ಹಂತದಲ್ಲಿ ವಿನ್ಯಾಸದಲ್ಲಿ ಮಾಡಲಾಗಿರುವ ಬದಲಾವಣೆಯಿಂದ ತೀವ್ರವಾಗಿ ಆಘಾತವಾಗಿರುತ್ತದೆ.
ಯಾವುದೇ ಸಮಯದಲ್ಲೂ ಇದು ಉಗ್ರ ಚಳುವಳಿ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಈ ಪರ್ಯಾಯ ಪ್ರಸ್ತಾವನೆಯಿಂದ ಯೋಜನೆಯ ಮೂಲ ಉದ್ದೇಶಕ್ಕೆ ಯಾವ ರೀತಿ ದುಷ್ಪರಿಣಾಮ ಉಂಟಾಗಲಿದೆಯೆಂದು ವಿಸ್ತ್ರತವಾಗಿ ಚರ್ಚಿಸಿ ಸಂಪೂರ್ಣ ವಿವರಗಳೊಂದಿಗೆ ತಮಗೆ ಸದ್ಯದಲ್ಲೇ ಮನವರಿಕೆ ಮಾಡಲಾಗುತ್ತದೆ.
ಇದನ್ನೂ ಓದಿ : ಮೈಸೂರು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ.. ಆರೋಪಿಗಳ ಬಂಧನಕ್ಕೆ ಸಿಎಂ ಸೂಚನೆ
ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ಭೈರಗೊಂಡ್ಲು ಜಲಾಶಯದ ಸಂಗ್ರಹಣಾ ಸಾಮರ್ಥ್ಯವನ್ನು 5.78 ಟಿಎಂಸಿ ಯಿಂದ 2 ಟಿಎಂಸಿವರೆಗೆ ಕಡಿತಗೊಳಿಸುವ ಪ್ರಸ್ತಾವನೆಯನ್ನು ಕೂಡಲೇ ಕೈಬಿಟ್ಟು, ಜಲಾಶಯಕ್ಕೆ ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆಯನ್ನು ಕೊರಟಗೆರೆ ಭೂಮಾಲೀಕರ ಬೇಡಿಕೆಯಂತೆಯೇ ಸಕಾರಾತ್ಮಕವಾಗಿ ಪರಿಗಣಿಸಿ, ಈಗಾಗಲೇ ಅನುಮೋದಿತ ಪರಿಷ್ಕೃತ ಯೋಜನಾ ವರದಿಯಂತೆ ನಿರ್ಮಾಣ ಕಾರ್ಯವನ್ನು ಮುಂದುವರೆಸುವಂತೆ ' ಪತ್ರದ ಮೂಲಕ ಹೆಚ್ ಡಿಕೆ ಕೋರಿದ್ದಾರೆ.