ಬೆಂಗಳೂರು: ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 2023ರ ಅಂತ್ಯಕ್ಕೆ ಪೂರ್ಣಗೊಳಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬದಲು ಉತ್ತರ ನೀಡಿದ ಗೃಹ ಸಚಿವರು, ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 2013-14 ನೇ ಸಾಲಿನಲ್ಲಿ ಆರಂಭಿಸಿದ್ದು, ಈವರೆಗೆ 7721.65 ಕೋಟಿ ರೂ.ಗಳ ಸಂಚಿತ ವೆಚ್ಚವಾಗಿದೆ ಎಂದರು.
ಭೂ ಸ್ವಾಧೀನ ಮಾಡಲಾಗುತ್ತಿದೆ. ಇದಕ್ಕೆ ಎರಡು ವರ್ಷವಾಗುವ ಕಾರಣ ಯೋಜನೆಯಡಿಯಲ್ಲಿ ಕುಡಿಯುವ ನೀರೊದಗಿಸುವ ಅಂತರ್ಜಲ ಮರುಪೂರ್ಣಗೊಳಿಸುವ ನೀರಾವರಿ ಮತ್ತು ಕೆರೆ ತುಂಬಿಸುವ ಯೋಜನೆಯ ಉದ್ದೇಶವನ್ನು ಸಬಲಗೊಳಿಸಲು ಗುತ್ತಿಗೆದಾರರು ರೈತರ ಒಪ್ಪಿಗೆ ಪಡೆದು ಕಾಮಗಾರಿ ಪ್ರಾರಂಭಿಸಲು ಒಪ್ಪಂದ ಪತ್ರದಲ್ಲಿ ಕರಾರು ವಿಧಿಸಲಾಗಿದೆ. ಜೊತೆಗೆ ರೈತರು, ನಿಗಮ ಮತ್ತು ಗುತ್ತಿಗೆದಾರರ ನಡುವೆ ತ್ರಿಪಕ್ಷೀಯ ಕರಾರು ಒಪ್ಪಂದ ಮಾಡಿಕೊಂಡು ರೈತರ ಸಹಮತ ಪಡೆದು ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದು, ಯೋಜನೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಯ ಮಹತ್ವಾಕಾಂಕ್ಷೆ ಹೊಂದಿರುವ ಎತ್ತಿನ ಹೊಳೆ ಯೋಜನೆ 2023ಕ್ಕೆ ಮುಗಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ನೀರು ಒದಗಿಸಲು ಸರ್ಕಾರ ಬದ್ದವಾಗಿದೆ. ಈಗಾಗಲೇ ಮೊದಲ ಹಂತ ಮುಗಿಯುತ್ತಾ ಬಂದಿದೆ. 2ನೇ ಹಂತ ಕೈಗೆತ್ತಿಕೊಳ್ಳುತ್ತಿದ್ದೇವೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗಲಿದೆ ಎಂದರು.
ಡಿಜೆ ಹಳ್ಳಿ ಗಲಭೆ ಕೇಸ್, ಫೆಬ್ರವರಿಯಲ್ಲಿ ಆರೋಪ ಪಟ್ಟಿ ಸಲ್ಲಿಕೆ:
ಡಿಕೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವವರ ವಿರುದ್ಧ ಫೆಬ್ರವರಿಯಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರ ವಿರುದ್ಧ ಆರೋಪ ಪಟ್ಟಿ ಸಲ್ಲಿಸದ ಬಗ್ಗೆ ಸದಸ್ಯ ಸಿ.ಎಂ ಇಬ್ರಾಹಿಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಗಲಭೆ ಯಾಕೆ ಆಯಿತು?, ಎಲ್ಲಿಂದ ಆಯಿತು? ಇತ್ಯಾದಿ ಎಲ್ಲವೂ ಈಗಾಗಲೇ ಬಹಿರಂಗವಾಗಿದೆ. ಈ ಸಂಬಂಧ 72 ಎಫ್ಐಆರ್ಗಳನ್ನು ಬೆಂಗಳೂರು ಪೊಲೀಸರು, 2 ಎಫ್ಐಆರ್ಗಳನ್ನು ಎನ್ಐಎ ನವರು ಹಾಕಿದ್ದಾರೆ. ಎನ್ಐಎ ಕೇಸ್ ಹೈಕೋರ್ಟ್ ಮೇಲುಸ್ತುವಾರಿಯಲ್ಲಿದೆ. ನಮ್ಮ ಪ್ರಕರಣಗಳಲ್ಲಿ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿದ್ದೇವೆ. ಎರಡು ಮೂರು ಮಾತ್ರ ಬಾಕಿಯಿದ್ದು, ಫೆಬ್ರವರಿಯಲ್ಲಿ ಅದನ್ನೂ ಸಲ್ಲಿಸಲಿದ್ದೇವೆ ಎಂದರು.
ಓದಿ: ಎತ್ತಿನಹೊಳೆ ಯೋಜನೆ 2024ಕ್ಕೆ ಪೂರ್ಣಗೊಳ್ಳಲಿದೆ: ಸಂಸದ ಬಚ್ಚೇಗೌಡ
ಅಮಾಯಕರನ್ನು ಬಂಧಿಸಿಲ್ಲ. ಘಟನೆ ನಂತರ ಸಾಕಷ್ಟು ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದೇವೆ. ಅದರಲ್ಲಿ ಅಮಾಯಕರು ಎಂದು ತಿಳಿದ ಕಾರಣಕ್ಕೆ 94 ಜನರನ್ನು ಬಿಡುಗಡೆ ಮಾಡಿದ್ದೇವೆ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ. ಅಲ್ಲಿ ಆಗುವ ತೀರ್ಮಾನದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸ್ ಕಾರ್ಯಾಚರಣೆಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುತ್ತಿಲ್ಲ. ಸಂಪೂರ್ಣ ಸ್ವಾತಂತ್ರ್ಯ ಕೊಡಲಾಗಿದೆ ಎಂದರು.
ಬಿಡಿಎ ಅಪಾರ್ಟ್ಮೆಂಟ್ಗೆ ಅಪ್ರೋಚ್ ರಸ್ತೆ ಕಲ್ಪಿಸಲು ಸೂಚನೆ:
ಬಿಡಿಎ ಅಪಾರ್ಟ್ಮೆಂಟ್ಗಳಿಗೆ ಅಪ್ರೋಚ್ ರಸ್ತೆ ಸಂಪರ್ಕ ಕಲ್ಪಿಸುವಂತೆ ಮತ್ತು ಕಟ್ಟಡದ ಗುಣಮಟ್ಟ ಕಾಯ್ದುಕೊಳ್ಳುವಂತೆ ಬಿಡಿಎ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಪ್ರಕಾಶ್ ರಾಥೋಡ್ ಪರವಾಗಿ ಎಂ. ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಸಿಎಂ ಪರವಾಗಿ ಉತ್ತರಿಸಿದ ಸಚಿವ ಬೊಮ್ಮಾಯಿ, 7,909 ಫ್ಲಾಟ್ಗಳಲ್ಲಿ 1,914 ಖಾಲಿ ಇವೆ. ಅವುಗಳ ಮಾರಾಟ ಪ್ರಕ್ರಿಯೆ ನಡೆದಿದೆ. ಕೆಲವು ಕಡೆ ಅಪ್ರೋಚ್ ರಸ್ತೆ ಇಲ್ಲ ಎನ್ನುವ ಆರೋಪ ಕೇಳಿ ಬಂದಿದ್ದು, ಕೂಡಲೇ ಅಪ್ರೋಚ್ ರಸ್ತೆ ಕಲ್ಪಿಸಲು ಸೂಚನೆ ನೀಡುತ್ತೇನೆ. ಜೊತೆಗೆ 5,086 ಫ್ಲಾಟ್ಗಳು ಇನ್ನು ನಿರ್ಮಾಣ ಹಂತದಲ್ಲಿವೆ. ಇವುಗಳ ಗುಣಮಟ್ಟ ಕಾಪಾಡಲು ಸೂಚನೆ ಕೊಡಲಿದ್ದೇನೆ ಎಂದರು.
ಅದಾನಿ ಕಂಪನಿಗೆ ಹೆಚ್ಚು ಹಣ ನೀಡಿಲ್ಲ:
ಅದಾನಿ ಸಂಸ್ಥೆಯ ಒಡೆತನದ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ ಪಡೆಯುವ ವಿದ್ಯುತನ್ನು ಕೆಇಆರ್ಸಿ ಮತ್ತು ಸಿಇಆರ್ಸಿ ನಿಯಮಾವಳಿಗಳ ಪ್ರಕಾರ ನಿಭಾಯಿಸುತ್ತಿರುವುದರಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ 1600 ಕೋಟಿ ನಷ್ಟ ಉಂಟಾಗಿದೆ ಎನ್ನುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಆರ್. ರಮೇಶ್ ಪ್ರಶ್ನೆಗೆ ಸಿಎಂ ಯಡಿಯೂರಪ್ಪ ಪರವಾಗಿ ಉತ್ತರ ನೀಡಿದ ಬೊಮ್ಮಾಯಿ, ಅದಾನಿ ಒಡೆತನದ ಕಂಪನಿ ಕರ್ನಾಟಕಕ್ಕೆ ಶೇ 90 ರಷ್ಟು ಮತ್ತು ಪಂಜಾಬ್ ಗೆ ಶೇ 10 ವಿದ್ಯುತ್ ಸರಬರಾಜು ಮಾಡುತ್ತಿದೆ. ಅಂತರ್ ರಾಜ್ಯ ವಿದ್ಯುತ್ ಪೂರೈಕೆ ಮಾಡುವ ಕಂಪನಿಯಾಗಿರುವ ಕಾರಣ ಸಿ.ಇ.ಆರ್.ಸಿ ನಿಯಮ ಅನ್ವಯ ಆಗಲಿದೆ.
ಉತ್ಪಾದನೆ ವೇಳೆ ಸಿಇಆರ್ಸಿ, ಬಳಕೆ ವೇಳೆ ಕೆಇಆರ್ಸಿ ದರ ನಿಗದಿ ಪಡಿಸಲಿವೆ. ಹಾಗಾಗಿ ಯಾವುದೇ ರೀತಿ ಹಣ ಹೆಚ್ಚಿಗೆ ಕೊಡುವ ಪ್ರಶ್ನೆ ಇಲ್ಲ. 1,600 ಕೋಟಿಯಷ್ಟು ಹೆಚ್ಚು ಹಣ ಕೊಟ್ಟಿಲ್ಲ. ದರ ನಿಯಂತ್ರಣ ಪ್ರಾಧಿಕಾರದ ಅನ್ವಯವೇ ನೀಡಲಾಗಿದೆ ಎಂದು ಮಾಹಿತಿ ನೀಡಿದರು.