ಬೆಂಗಳೂರು: ಕಿಕ್ ಬ್ಯಾಕ್ ಪಡೆದು ಮೈತ್ರಿ ಸರ್ಕಾರ ಜಿಂದಾಲ್ಗೆ ಭೂಮಿ ನೀಡಿದೆ. ಇದರ ವಿರುದ್ಧ ಜೂನ್ 14-16ರ ವರೆಗೆ ನಮ್ಮ ಎಲ್ಲಾ ಶಾಸಕರು, ಸಂಸದರು ಸೇರಿ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಕ್ ಬ್ಯಾಕ್ ಪಡೆದುಕೊಂಡು ಮೈತ್ರಿ ಸರ್ಕಾರ ಜಿಂದಾಲ್ಗೆ ಭೂಮಿ ನೀಡುತ್ತಿದೆ. ಜೂನ್ 13ರಂದು ದೆಹಲಿಗೆ ಹೋಗಬೇಕಿದೆ. ಹೀಗಾಗಿ 13, 14, 15ರ ಬದಲಾಗಿ 14, 15, 16ರಂದು ಬೆಂಗಳೂರಿನಲ್ಲಿ ಮೂರು ದಿನ ಧರಣಿ ಪ್ರತಿಭಟನೆ ನಡೆಸುತ್ತೇವೆ ಎಂದಿದ್ದಾರೆ.
ಜಿಂದಾಲ್ಗೆ ಭೂಮಿ ನೀಡುತ್ತಿರುವ ನಿರ್ಧಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಮೊದಲು ಭೂಮಿ ನೀಡುತ್ತೇವೆ ಎಂದರು. ಈಗ ಐರನ್ ವೋರ್ ತೆಗೆಯೋದಕ್ಕೆ ಬಿಡಲ್ಲ ಅಂತಾರೆ. ಆದರೆ ಭೂಮಿ ಎಂದು ಹೇಳಿ ಅವರಿಗೆ ಕೊಟ್ಟರೆ ಅವರು ಏನು ಬೇಕಾದರೂ ಮಾಡಬಹುದು. ಹಾಗಾಗಿ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಭೂಮಿ ಮಾರಾಟಕ್ಕೆ ಮುಂದಾಗಿದ್ದಾರೆ. ಕಿಕ್ ಬ್ಯಾಕ್ ಪಡೆದುಕೊಂಡು ದೊಂಬರಾಟವಾಡುತ್ತಿದ್ದಾರೆ. ಇದನ್ನ ನಾವು ವಿರೋಧಿಸುತ್ತೇವೆ. ಈ ವಿಚಾರದಲ್ಲಿ ಸತ್ಯ ಸಂಗತಿಯನ್ನ ರಾಜ್ಯದ ಜನರಿಗೆ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. ಹಾಗಾಗಿ ಅವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಮೂರು ದಿನ ಬರ ಅಧ್ಯಯನ ಮಾಡಿ ಬಂದಿದ್ದೇನೆ. ಜನರ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತದೆ. ಮುಖ್ಯಮಂತ್ರಿಗೆ ಕಾಳಜಿ ಇಲ್ಲ. ಅವರು ಎಲ್ಲಿಯೂ ಹೋಗ್ತಿಲ್ಲ. ಮಾಧ್ಯಮದವರಿಗೆ ಅಸಂಬದ್ಧ ಹೇಳಿಕೆ ನೀಡ್ತಾ ಕೂತಿದ್ದಾರೆ. ಈಗ ಗ್ರಾಮ ವಾಸ್ತವ್ಯದಿಂದ ಏನು ಪ್ರಯೋಜನ? ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಮೂರು ದಿನ ಹೋರಾಟ ಮಾಡಿ ಅವರ ಕಣ್ಣು ತೆರೆಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.