ಬೆಂಗಳೂರು: ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ಎರಡನೇ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿಗೆ ಒಂದು ವರ್ಷವಾಯಿತು. ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷವಾಗುತ್ತಿರುವ ಸಂಭ್ರಮದಲ್ಲಿರುವ ಬಿಜೆಪಿಯಲ್ಲಿ ಬಿಎಸ್ವೈ ರಾಜೀನಾಮೆ ನೀಡಿ ವರ್ಷವಾಯಿತು ಎನ್ನುವ ದುಃಖವೂ ಇದೆ.
2021 ಜುಲೈ 26 ರಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷದ ಸಂಭ್ರಮದ ದಿನ. ವಿಧಾನಸೌಧದಲ್ಲಿ ಎರಡು ವರ್ಷದ ಸಾಧನಾ ಸಮಾವೇಶ ನಡೆಸಿದ ಯಡಿಯೂರಪ್ಪ, ಭಾವುಕರಾಗಿ ಕಣ್ಣೀರಿನೊಂದಿಗೆ ವಿದಾಯದ ಭಾಷಣ ಮಾಡಿ ನೇರವಾಗಿ ವಿಧಾನಸೌಧದಿಂದ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಎರಡು ವರ್ಷ ರಾಜ್ಯವನ್ನು ಆಳಿದ ರಾಜಾಹುಲಿ ರಾಜೀನಾಮೆ ನೀಡಿ ಇಂದಿಗೆ ವರ್ಷವಾಗಿದೆ.
2018 ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ವೇಳೆಯೇ ಪಕ್ಷದಲ್ಲಿನ ಅಲಿಖಿತ ನಿಯಮ 75 ವರ್ಷ ದಾಟಿದವರಿಗೆ ಅಧಿಕಾರವಿಲ್ಲ ಎನ್ನುವ ನಿಯಮವನ್ನು ಬಿಜೆಪಿ ಹೈಕಮಾಂಡ್ ಜಾರಿ ಮಾಡಿತ್ತು. ಇಡೀ ದೇಶಕ್ಕೆ ಅನ್ವಯವಾಗುವ ನಿಯಮದಲ್ಲಿ ಯಡಿಯೂರಪ್ಪ ಅವರೊಬ್ಬರಿಗೆ ಮಾತ್ರ ವಿನಾಯಿತಿ ನೀಡಿ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವ ಘೋಷಣೆ ಮಾಡಲಾಗಿತ್ತು.
ಅಂದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಮಾಡಿದರೂ ಬಹುಮತಕ್ಕೆ ಬೇಕಾದ ಸಂಖ್ಯಾಬಲವಿಲ್ಲದ ಕಾರಣಕ್ಕೆ ಯಡಿಯೂರಪ್ಪ ಕೇವಲ ಆರು ದಿನಕ್ಕೆ ರಾಜೀನಾಮೆ ನೀಡಿದರು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಒಂದು ವರ್ಷದಲ್ಲೇ ಪತನಗೊಳಿಸಿದ ಯಡಿಯೂರಪ್ಪ, ಛಲಬಿಡದ ತ್ರಿವಿಕ್ರಮನಂತೆ 2019 ರ ಜುಲೈ 26 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಇದನ್ನೂ ಓದಿ:ಸಿನಿಮಾ, ಶ್ವಾನ, ಕ್ರಿಕೆಟ್.. ಸಿಂಪಲ್ ಸಿಎಂ ರಾಜಕೀಯೇತರ ಬದುಕಿನ ಸುತ್ತ ಒಂದು ರೌಂಡ್ಸ್ !
ನೆರೆಹಾವಳಿ, ಕೋವಿಡ್ ಸಂಕಷ್ಟದಲ್ಲೂ ಎರಡು ವರ್ಷ ರಾಜ್ಯವನ್ನು ಸಮರ್ಥವಾಗಿ ಮುನ್ನೆಡಸಿದ ಯಡಿಯೂರಪ್ಪ ಅವರು ಪಕ್ಷದ ಹೈಕಮಾಂಡ್ ಸೂಚನೆಯಂತೆ 2021 ರ ಜುಲೈ 26 ರಂದು ಎರಡು ವರ್ಷದ ಸಾಧನಾ ಸಮಾರಂಭ ನಡೆಸಿ ಸಮಾರಂಭದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ವಿದಾಯದ ಘೋಷಣೆ ಮಾಡಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದ ಅವರಿಗೆ ಪಕ್ಷದಿಂದ ಸೂಕ್ತ ಸಹಕಾರ ಸಿಗಲಿಲ್ಲ. ರಾಜ್ಯ ನಾಯಕರು, ಹೈಕಮಾಂಡ್ನಿಂದ ಸಾಕಷ್ಟು ಅಡ್ಡಿಗಳು ಎದುರಾದವು. ಈ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಮೊದಲಿನಂತೆ ಸಕ್ರಿಯವಾಗಿರದ ಬಿಎಸ್ವೈ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ಕಳೆದ ವಾರವಷ್ಟೇ ಚುನಾವಣಾ ರಾಜಕೀಯಕ್ಕೂ ವಿದಾಯ ಹೇಳಿ ರಾಜಕೀಯದ ಒಂದು ಮಗ್ಗುಲನ್ನು ಮುಗಿಸಿದ್ದಾರೆ.