ಬೆಂಗಳೂರು: ಸ್ವತಂತ್ರ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ ಆರೋಪ ಇಂದು ಕೂಡ ಉಭಯ ಸದನಗಳ ಕಲಾಪವನ್ನು ನುಂಗಿ ಹಾಕಲಿದೆ.
ನಿನ್ನೆ ವಿಧಾನಮಂಡಲದ ಉಭಯ ಸದನದಲ್ಲಿ ಯತ್ನಾಳ್ ವಿಷಯ ಪ್ರಸ್ತಾಪಕ್ಕೆ ಸೂಕ್ತ ಅವಕಾಶ ಸಿಗದ ಹಿನ್ನೆಲೆ ಇಂದೂ ಕೂಡ ಯತ್ನಾಳ್ ವಿಚಾರವನ್ನೇ ಮುಂದಿಟ್ಟುಕೊಂಡು ಗದ್ದಲ ಎಬ್ಬಿಸಲಿರುವ ಕಾಂಗ್ರೆಸ್ ತಮ್ಮ ಮಾತಿಗೆ ಅವಕಾಶ ನೀಡುವಂತೆ ವಿಧಾನಸಭೆ ಸ್ಪೀಕರ್ ಹಾಗೂ ವಿಧಾನ ಪರಿಷತ್ ಸಭಾಪತಿಗಳಿಗೆ ಒತ್ತಾಯ ಮಾಡಲಿದೆ. ಈ ಬಗ್ಗೆ ಚರ್ಚಿಸಲು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಸಭೆಯನ್ನೂ ಕರೆದಿದ್ದಾರೆ. ಸದನದಲ್ಲಿ ತಮ್ಮ ಸಂಖ್ಯಾ ಬಲದ ಬಗ್ಗೆಯೂ ಗಮನ ಹರಿಸಿರುವ ವಿಪಕ್ಷ ಕಾಂಗ್ರೆಸ್ ಎಲ್ಲ ಶಾಸಕರುಗಳಿಗೂ ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ವಿಪ್ ಜಾರಿ ಮಾಡಿದೆ.