ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುಳಿವಿನ ಕುರಿತು ಅವರ ಪುತ್ರ ಹಾಗೂ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ವರುಣದಿಂದ ಸ್ಪರ್ಧೆ ಮಾಡ್ತಾರೆ ಎಂದು ಸಾಕಷ್ಟು ಜನ ಕೇಳಿದ್ದಾರೆ. ನಾನು ಸಾಕಷ್ಟು ಬಾರಿ ಉತ್ತರ ಹೇಳಿದ್ದೇನೆ. ತಂದೆಯವರು ಎಲ್ಲಿ ನಿಲ್ಲಬೇಕು ಎಂದು ತೀರ್ಮಾನ ಮಾಡಿಲ್ಲ. ಎಲ್ಲಿ ನಿಲ್ಲಬೇಕು ಎಂದು ತೀರ್ಮಾನ ಮಾಡಿದ್ರೆ ನಾವು ಬದ್ಧವಾಗಿದ್ದೇವೆ. ವರುಣದಲ್ಲಿಂದಾದರೂ ನಿಲ್ಲಬಹುದು, ಬೇರೆ ಕಡೆಯಾದರೂ ನಿಲ್ಲಬಹುದು. ಬೇರೆ ಕಡೆಯಲ್ಲೂ ಅವರನ್ನು ಕರೆಯುತ್ತಿದ್ದಾರೆ ಎಂದಿದ್ದಾರೆ.
ವರುಣ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಅಪ್ಪ ತೀರ್ಮಾನ ಮಾಡಿದ್ರೆ, ನಾನು ಪಕ್ಷದ ಶಾಸಕ ಹಾಗೂ ಆ ಕ್ಷೇತ್ರದ ಹಿಂದಿನ ಶಾಸಕನಾಗಿ ಅವರ ಪರ ಕೆಲಸ ಮಾಡಬೇಕಾಗುತ್ತದೆ. ಅಪ್ಪ ನಿಂತರೆ ನಾನು ಎಲ್ಲೂ ಸ್ಪರ್ಧೆ ಮಾಡಲ್ಲ. ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಪ್ಪನಿಗಾಗಿ ಪ್ರಚಾರ ಮಾಡ್ತೇನೆ. ತ್ಯಾಗ ಏನೂ ಅಲ್ಲ, ತಂದೆ ನಿಲ್ತಾರೆ ಅಂದ್ರೆ ಬೇರೆಯವರು ಬಿಟ್ಟು ಕೊಡ್ತಾರೆ. ನಾನು ಕೂಡ ಪಕ್ಷದ ಕಾರ್ಯಕರ್ತನಾಗಿ ಬಿಟ್ಟು ಕೊಡುತ್ತೇನೆ ಎಂದಿದ್ದಾರೆ.
ವರುಣಾದಿಂದ ಸಿದ್ದರಾಮಯ್ಯ ಚುನಾವಣೆಗೆ ನಿಂತರೆ ನಾನು ನಿಲ್ಲಲ್ಲ ಎಂದು ಯತೀಂದ್ರ ಹೇಳಿಕೆ ವಿಚಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಅದು ಅವರ ಅಭಿಪ್ರಾಯ, ಇದು ನನ್ನ ಅಭಿಪ್ರಾಯ ಎಂದು ನಗುತ್ತಾ ತೆರಳಿದರು.
ಖರ್ಗೆ ಗೆಲ್ಲುವುದು ನೂರಕ್ಕೆ ನೂರು ನಿಶ್ಚಿತ : ಎಐಸಿಸಿ ಅಧ್ಯಕ್ಷೀಯ ಚುನಾವಣೆ ವಿಚಾರವಾಗಿ ಮಾತನಾಡಿ, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ 503 ಮತಗಳು ಕರ್ನಾಟಕದಲ್ಲಿವೆ. ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕರು. 50 ವರ್ಷಗಳಿಂದ ರಾಜಕೀಯದಲ್ಲಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆಲ್ಲುವ ವಿಶ್ವಾಸ ಇದೆ. ಕರ್ನಾಟಕದ ಎಲ್ಲ ಮತಗಳು ಅವರಿಗೆ ಬೀಳುತ್ತವೆ ಎಂಬ ವಿಶ್ವಾಸ ಇದೆ. ಈ ಚುನಾವಣೆಯಲ್ಲಿ ಖರ್ಗೆ ಗೆಲ್ಲುವುದು ನೂರಕ್ಕೆ ನೂರು ನಿಶ್ಚಿತ ಎಂದಿದ್ದಾರೆ.
ಆಂತರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ: ಖರ್ಗೆ ರಬ್ಬರ್ ಸ್ಟಾಂಪ್ ಅಧ್ಯಕ್ಷ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಚುನಾವಣೆ ಮಾಡೋದೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಅವರಿಗೆ ನಂಬಿಕೆ ಇಲ್ಲ . ಕಾಂಗ್ರೆಸ್ ಪಕ್ಷಕ್ಕೆ ಆಂತರಿಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆ. ಬೊಮ್ಮಾಯಿ ಆರ್ಎಸ್ಎಸ್ ಕೃಪಾಕಟಾಕ್ಷದಿಂದ ಸಿಎಂ ಆಗಿದ್ದಾರೆ. ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮಾಡಿದ್ರಾ? ಎಂದು ಪ್ರಶ್ನಿಸಿದರು.
ಓದಿ: ದೀಪಾವಳಿ ಹಬ್ಬದ ಪ್ರಯುಕ್ತ 1500ಕ್ಕೂ ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಿದೆ ಕೆಎಸ್ಆರ್ಟಿಸಿ