ಬೆಂಗಳೂರು: ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯ ಜೊತೆಯಲ್ಲಿಯೇ ಈ ಹಿಂದೆ ಇದ್ದ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಅಕ್ಟೋಬರ್ 2ರಿಂದ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಸಹಕಾರ ಸಚಿವ ಎಸ್ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಇಂದು ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಯುಷ್ಮಾನ್ ಭಾರತ್ ಯೋಜನೆ ಇದ್ದರೂ ಕರ್ನಾಟಕದಾದ್ಯಂತ ಯಶಸ್ವಿನಿ ಮರುಜಾರಿ ಬೇಡಿಕೆ ಇತ್ತು. ಇದಕ್ಕೆ ಆರೋಗ್ಯ, ಹಣಕಾಸು ಇಲಾಖೆಯ ಅನುಮತಿ ಸಿಕ್ಕಿದೆ. ಯಶಸ್ವಿನಿ ಯೋಜನೆಗೆ ಹಳೆ ಟ್ರಸ್ಟ್ ಇತ್ತು ಅದನ್ನು ಹೊಸದಾಗಿ ಮಾಡುತ್ತಿದ್ದೇವೆ ಎಂದರು.
ಅಕ್ಟೋಬರ್ 2ರಿಂದ ಯೋಜನೆ ಜಾರಿ ಮಾಡುವುದಾಗಿ ಈಗಾಗಲೇ ಸಿಎಂ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ಆಯುಷ್ಮಾನ್, ಯಶಸ್ವಿನಿ ಯೋಜನೆ ಎರಡೂ ಇರಲಿವೆ. ಹಿಂದೆ ಇದ್ದ ಎಲ್ಲ ವ್ಯವಸ್ಥೆ ಅಳವಡಿಸಿಕೊಂಡು ಯಶಸ್ವಿನಿ ಯೋಜನೆ ಜಾರಿಯಾಗಲಿದೆ. ಅನುಷ್ಠಾನದ ನಂತರ ಯಾವುದೇ ತೊಂದರೆ ಆಗಬಾರದು ಎಂದು ಎಲ್ಲ ಆಯಾಮದಲ್ಲಿಯೂ ಪರಿಶೀಲಿಸಿ ಸಮಯ ಪಡೆದು ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದರು.
ಈ ವೇಳೆ, ಮಳೆಗಾಲದ ಅಧಿವೇಶನ ಮುಗಿಯುವ ಮೊದಲೇ ಯೋಜನೆ ಜಾರಿಗೆ ಮಾಡಿಕೊಂಡಿರುವ ಸಿದ್ಧತೆ ವಿವರ ನೀಡಬೇಕು. ಟ್ರಸ್ಟ್ ಸದಸ್ಯರ ಹೊಸ ನೇಮಕ ಪ್ರಕ್ರಿಯೆ ಮುಗಿಸಿ ಮಾಹಿತಿ ನೀಡಿಬೇಕೆಂದು ಸದಸ್ಯ ಪ್ರಕಾಶ್ ರಾಥೋಡ್ ಎಂದು ಒತ್ತಾಯಿಸಿದರು. ಈ ವೇಳೆ, ಸಭಾಪತಿ ರಘುನಾಥರಾವ್ ಮಲ್ಕಾಪುರೆ, ನೀವು ಹೇಳಿದಂತೆ ಸಚಿವರು ಉತ್ತರ ಹೇಳಬೇಕು ಎಂದರೆ ಆಗಲ್ಲ ಸದನ ಮುಗಿಯುವ ಮೊದಲು ಯೋಜನೆ ರೂಪುರೇಷೆಗಳನ್ನು ಹೇಳಬೇಕೆಂದು ಪ್ರಶ್ನಿಸಿದರು.
ಇದನ್ನೂ ಓದಿ: ಯಶಸ್ವಿನಿ ಯೋಜನೆ: ಕಾರ್ಡ್ ಪಡೆಯಲು ಇರಬೇಕಾದ ಅರ್ಹತೆಗಳೇನು?- ಯಾವೆಲ್ಲ ರೋಗಗಳಿಗೆ ಇದು ಅನ್ವಯ ಆಗುತ್ತೆ?
ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ, ಗ್ರಾಮೀಣ ಕರ್ನಾಟಕದ ರೈತಾಪಿ ವರ್ಗದ ಆರೋಗ್ಯದ ದೃಷ್ಟಿಯಿಂದ ನಾನು ಸಹಕಾರಿ ಮಂತ್ರಿ, ಎಸ್ಎಂ ಕೃಷ್ಣ ಸಿಎಂ ಆಗಿದ್ದಾಗ ಯಶಸ್ವಿನಿ ಯೋಜನೆ ತರಲಾಗಿತ್ತು. ಆದರೆ, ಕಾಂಗ್ರೆಸ್ ತಂದ ಯೋಜನೆಯನ್ನೇ ಮತ್ತೊಂದು ಕಾಂಗ್ರೆಸ್ ಸರ್ಕಾರ ರದ್ದು ಮಾಡಿದ್ದು ದುರ್ದೈವದ ಸಂಗತಿಯಾಗಿದೆ. ಈಗ ಬಿಜೆಪಿ ಸರ್ಕಾರ ಮತ್ತೆ ಜಾರಿಗೆ ತರುತ್ತಿರುವುದು ಸಂತಸದ ವಿಷಯ ಎಂದರು.
ಈ ಯೋಜನೆ ಸಹಕಾರ ಇಲಾಖೆಯಲ್ಲಿಯೇ ಇರಿಸಿಕೊಳ್ಳಿ ಆರೋಗ್ಯ ಇಲಾಖೆಗೆ ಕೊಡಬೇಡಿ, ಈ ಹಿಂದೆ ಆರೋಗ್ಯ ಇಲಾಖೆಗೆ ಕೊಟ್ಟಿದ್ದಕ್ಕಾಗಿಯೇ ಯೋಜನೆ ಹಾಳಾಗಿತ್ತು. ಹಾಗಾಗಿ ಯೋಜನೆಯನ್ನು ಸಹಕಾರ ಇಲಾಖೆಯಲ್ಲಿಯೇ ಇರಿಸಿಕೊಳ್ಳಿ. ಹಾರ್ವರ್ಡ್ ವಿವಿಯಲ್ಲಿಯೂ ಈ ಯೋಜನೆಯನ್ನು ಅಧ್ಯಯನಕ್ಕೊಳಪಡಿಸಿದ ಯೋಜನೆ ಇದಾಗಿದೆ. ಖಾಸಗಿ ಕಂಪನಿಗಳ ಸಿಎಸ್ಆರ್ ಫಂಡ್ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮತ್ತೊಬ್ಬ ಬಿಜೆಪಿ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ನಾನು ಸಹಕಾರ ಸಚಿವನಾಗಿದ್ದ ಕೂಡ ಅನುದಾನ ಕೊಟ್ಟು ಯೋಜನೆ ಮುಂದುವರೆಸಿದೆವು. ಆದರೆ, ಹಿಂದಿನ ಸರ್ಕಾರ ಆರೋಗ್ಯ ಇಲಾಖೆಯಡಿ ಯೋಜನೆ ವಿಲೀನಗೊಳಿಸಿ ಎಲ್ಲ ಯೋಜನೆ ಒಟ್ಟಿಗೆ ತಂದಿತು. ಫಲಾನುಭವಿಗಳು ಆಯುಷ್ಮಾನ್, ಯಶಸ್ವಿನಿ ಕಡೆ ಲಾಭ ಪಡೆಯದಂತೆ ನೋಡಿಕೊಳ್ಳಬೇಕು. ಅನೇಕ ಆಸ್ಪತ್ರೆಗಳು ಯೋಜನೆ ಹಣ ದುರುಪಯೋಗ ಮಾಡಿಕೊಂಡಿದ್ದರು. ಇದೆಲ್ಲವನ್ನೂ ಗಮನಿಸಿ ಎಚ್ಚರಿಕೆಯಿಂದ ಜಾರಿಗೆ ತರಬೇಕೆಂದು ಹೇಳಿದರು.
ರಾಯಚೂರು ಕಲುಷಿತ ನೀರು ಪ್ರಕರಣ, ಇಬ್ಬರ ವಿರುದ್ಧ ಕ್ರಮ: ರಾಯಚೂರು ನಗರಸಭಾ ವ್ಯಾಪ್ತಿಯಲ್ಲಿ ಕಲುಷಿತ ನೀರು ಸೇವಿಸಿ ಏಳು ಮಂದಿ ಮೃತಪಟ್ಟ ಪ್ರಕರಣ ಸಂಬಂಧ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ವೆಂಕಟೇಶ್ರನ್ನು ಅಮಾನತುಗೊಳಿಸಿದ್ದು, ಕಿರಿಯ ಅಭಿಯಂತರ ಕೃಷ್ಣರನ್ನ ಸೇವೆಯಿಂದ ತೆಗೆದು ಹಾಕಲಾಗಿದೆ ಎಂದು ಪೌರಾಣಿಕ ಸಚಿವ ಎಂಟಿಬಿ ನಾಗರಾಜ್ ಮಾಹಿತಿ ನೀಡಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯುಬಿ ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಲುಷಿತ ನೀರು ಸೇವಿಸಿ ಐವರು ಮೃತರಾಗಿದ್ದು, ಸಿಎಂ ಪರಿಹಾರ ನಿಧಿಯಿಂದ ಐದು ಲಕ್ಷ, ನಗರಸಭೆಯಿಂದ ಹತ್ತು ಲಕ್ಷ ಸೇರಿ ತಲಾ 15 ಲಕ್ಷ ರೂ. ಪರಿಹಾರ ಕೊಡಲಾಗಿದೆ. ಮತ್ತಿಬ್ಬರು ಮೃತರಾದ ವರದಿ ಬಂದಿದ್ದು, ಅವರಿಗೂ 15 ಲಕ್ಷ ಪರಿಹಾರ ನೀಡಲಾಗುತ್ತದೆ. ಇನ್ನಿಬ್ಬರ ಸಾವಿಗೆ ಹೃದಯಾಘಾತ ಕಾರಣ ಎನ್ನಲಾಗಿದೆ. ಅವರಿಗೆ ಪರಿಹಾರ ನೀಡಿಲ್ಲ ಎಂದರು.
ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಐವರ ಸಾವು: ಜಲ ಶುದ್ಧೀಕರಣ ಘಟಕಕ್ಕೆ ಸಚಿವ ಮುನೇನಕೊಪ್ಪ ಭೇಟಿ
ಐದು ಕೋಟಿ ಹಣ ಬಿಡುಗಡೆ ಮಾಡಿ ಟ್ಯಾಂಕ್ ಸ್ವಚ್ಚ, ಬ್ಲೀಚಿಂಗ್ ಇತ್ಯಾದಿಗಳ ವ್ಯವಸ್ಥೆ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳಲಾಗಿದೆ. 20 ವರ್ಷದಿಂದ ಟ್ಯಾಂಕ್ ಸ್ವಚ್ಚ ಮಾಡಿಲ್ಲದ ಆರೋಪ ಬಂದಿರುವ ಕಾರಣಕ್ಕೆ ಸಂಬಂಧಿಸಿದ ಅಧಿಕಾರಿಗಳ ಅಮಾನತು ಮಾಡಲಾಗಿದೆ ಎಂದರು. ಸಚಿವರ ಉತ್ತರಕ್ಕೆ ವೆಂಕಟೇಶ್ ತೃಪ್ತರಾಗದೇ ಪದೇ ಪದೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ, ಖುದ್ದಾಗಿ ಹೋಗಿ ಅಥವಾ ಅಧಿಕಾರಿಗಳ ಕರೆಸಿ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಸಚಿವ ಎಂಟಿಬಿ ನಾಗರಾಜ್ ಅವರಿಗೆ ಸೂಚಿಸಿ ಚರ್ಚೆಗೆ ತೆರೆ ಎಳೆದರು.
ಮಾತೃಪೂರ್ಣ ಯೋಜನೆಯಡಿ ಟೇಕ್ ಹೋಂ ರೇಷನ್: ರಾಜ್ಯದ ಗುಡ್ಡಗಾಡು ಮತ್ತು ಮಲೆನಾಡು ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಮಾತೃಪೂರ್ಣ ಯೋಜನೆಯಡಿ ಟೇಕ್ ಹೋಂ ರೇಷನ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದು, ಹಂತ-ಹಂತವಾಗಿ ಇದನ್ನು ರಾಜ್ಯಾದ್ಯಂತ ವಿಸ್ತರಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.
ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ, ಗರ್ಭಿಣಿಯರು ಮತ್ತು ಬಾಣಂತಿಯರು ಬಿಸಿಯೂಟಕ್ಕೆ ಅಂಗನವಾಡಿಗೆ ತೆರಳುವ ಪದ್ದತಿಗೆ ಆಕ್ಷೇಪಿಸಿ ಅವರವರ ಮನೆಗಳಿಗೆ ಬಿಸಿಯೂಟ ತಲುಪಿಸುವಂತೆ ಆಗ್ರಹಿಸಿದರು. ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ, ಗರ್ಭಿಣಿ, ಬಾಣಂತಿ ಕೇವಲ ಊಟ ಮಾಡಲು ಅಂಗನಾಡಿಗೆ ಹೋಗಬೇಕು ಎನ್ನುವುದು ನಾಚಿಕೆಗೇಡಿನ ವಿಷಯ. ಈ ಪದ್ಧತಿ ನಿಲ್ಲಿಸಿ, ಮನೆಗೆ ಆಹಾರ ತಲುಪಿಸಿ ಎಂದರು.
ಇದನ್ನೂ ಓದಿ: ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪದ ಹಾಡುಗಳ ಬಿಡುಗಡೆಗೆ ಮಾಡಲು ಮುಂದಾದ ಕಾಂಗ್ರೆಸ್