ಬೆಂಗಳೂರು : ವೇಗವಾಗಿ ಬೈಕ್ ಚಲಾಯಿಸಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿ, ಯುವಕನ ಕೈ ತುಂಡಾಗಿರುವ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸನಾ ಸಾಹಿಬಾ (18) ಮೃತಪಟ್ಟ ಯುವತಿಯಾಗಿದ್ದು, ಸ್ನೇಹಿತ ಜಿಶಾನ್ ಎಂಬಾತನ ಬಲಗೈ ತುಂಡಾಗಿ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಇಬ್ಬರೂ ಆರ್.ಟಿ.ನಗರದ ನಿವಾಸಿಗಳಾಗಿದ್ದು, ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಜಿಶಾನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಗೆಳತಿಯನ್ನು ಕೂರಿಸಿಕೊಂಡು ಡ್ಯೂಕ್ ಬೈಕ್ನಲ್ಲಿ ದೇವನಹಳ್ಳಿ ಕಡೆ ಹೋಗುತ್ತಿದ್ದಾಗ, ಜಕ್ಕೂರು ಮೇಲ್ಸೇತುವೆ ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಅಪಘಾತದ ರಭಸಕ್ಕೆ ಯುವತಿ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟದ್ದು, ಜಿಶಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಯಲಹಂಕ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಶಿಕಾರಿಪುರ : ಶ್ರೀಗಂಧ ಕದ್ದ ಮೂವರಿಗೆ 5 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ