ಬೆಂಗಳೂರು: ರಾಜ್ಯ ಸಚಿವ ಸಂಪುಟ ರಚನೆ ಪಟ್ಟಿ ಹಿಡಿದು ಸಿಎಂ ಯಡಿಯೂರಪ್ಪ ದೆಹಲಿ ವಿಮಾನ ಏರಿದ್ದು, ಹೈಕಮಾಂಡ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಬಿ ಎಸ್ ಯಡಿಯೂರಪ್ಪಗೆ ಬಸವರಾಜ್ ಬೊಮ್ಮಾಯಿ ಹಾಗೂ ಆರ್.ಅಶೋಕ್ ಸಾಥ್ ನೀಡಿದ್ದಾರೆ. ಸಚಿವ ಸಂಪುಟದ ಆಯ್ಕೆ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಸಿಎಂ ದೆಹಲಿಗೆ ದೌಡಾಯಿಸಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಯಾಗಿ ಸಂಪುಟದಲ್ಲಿ ಯಾರ್ಯಾರು ಸೇರಬೇಕೆಂಬುದನ್ನ ಅಂತಿಮಗೊಳಿಸಲಿದ್ದಾರೆ.
ಅಮಿತ್ ಶಾ ಭೇಟಿಗೂ ಮುನ್ನ ರಾಜ್ಯದ ಸಂಸದರೊಂದಗೆ ಚರ್ಚೆ ನಡೆಸಲಿದ್ದು, ರಾಜ್ಯದ ಬರ ಪರಿಸ್ಥಿತಿ, ನೆರೆ ಹಾವಳಿ ಸಂಕಷ್ಟಕ್ಕೆ ಸ್ಪಂದಿಸುವಂತೆ ಕೇಂದ್ರಕ್ಕೆ ಮನವಿ ಮಾಡಿ ಅನುದಾನಕ್ಕೆ ಬೇಡಿಕೆ ಇಡಲಿದ್ದಾರೆ. ನಂತರ ಸಂಪುಟ ರಚನೆ ಸಂಬಂಧ ಹೈಕಮಾಂಡ್ ನಾಯಕರೊಂದಿಗೆ ಸಿಎಂ ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ. ಎಷ್ಟು ಜನರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು, ಯಾರಿಗೆ ಅವಕಾಶ ನೀಡಬೇಕು ಎನ್ನುವ ಕುರಿತು ಚರ್ಚೆ ನಡೆಸಲಿದ್ದಾರೆ.