ಬೆಂಗಳೂರು: ಕುಮಾರಸ್ವಾಮಿ ಸರ್ಕಾರದ ಮತ್ತೊಂದು ಯೋಜನೆಗೂ ಕತ್ತರಿ ಬೀಳುವ ಸಾಧ್ಯತೆ ಇದೆ. ಕುಮಾರಸ್ವಾಮಿಯವರ ರೈತರ ಸಾಲಮನ್ನಾ ಯೋಜನೆಯನ್ನು ಕೊನೆಗೊಳಿಸಲು ಮುಂದಾಗಿರುವ ಸಿಎಂ ಯಡಿಯೂರಪ್ಪ ಸರ್ಕಾರ ಇದೀಗ ಬಡವರ ಬಂಧು ಯೋಜನೆಗೂ ಕತ್ತರಿ ಹಾಕುವ ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆರ್ಥಿಕವಾಗಿ ಅಶಕ್ತರಾದವರು, ಬೀದಿಬದಿ ವ್ಯಾಪಾರಿಗಳನ್ನು ಲೇವದೇವಿದಾರರ ಮೀಟರ್ ಬಡ್ಡಿ ವರ್ತುಲದಿಂದ ಪಾರು ಮಾಡುವ ಸದುದ್ದೇಶದಿಂದ ಜಾರಿ ಮಾಡಲಾದ ಬಡವರ ಬಂಧು ಯೋಜನೆ ಬಿಜೆಪಿ ಸರ್ಕಾರ ಬಂದಾಗಿನಿಂದ ಬಹುತೇಕ ನೆನಗುದಿಗೆ ಬಿದ್ದಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನೇತೃತ್ವವಹಿಸಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳನ್ನು ಸಾಲದ ಸುಳಿಯಿಂದ ರಕ್ಷಿಸಬೇಕು ಎಂದು ಬಡವರ ಬಂಧು ಯೋಜನೆಯನ್ನು 2018ರ ನವೆಂಬರ್ 22 ರಂದು ಜಾರಿಗೊಳಿಸಿದರು. ಇದೀಗ ಈ ಯೋಜನೆಗೆ ಇತಿಶ್ರೀ ಹೇಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರವು ತೀರ್ಮಾನಿಸಿದೆ ಎನ್ನಲಾಗಿದೆ.
ಮಾರ್ಚ್ 5 ರಂದು ಮಂಡಿಸುವ ಬಜೆಟ್‌ನಲ್ಲಿ ಬಡವರ ಬಂಧು ಯೋಜನೆಯನ್ನು ಕೈ ಬಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಆರ್ಥಿಕ ಸಂಕಷ್ಟ, ರಾಜ್ಯದ ಪಾಲಿನ ಕೇಂದ್ರದ ತೆರಿಗೆ ಪಾಲು ಬಾರದೆ ಇರುವುದರಿಂದ ರಾಜ್ಯದ ಬೊಕ್ಕಸ ಬರಿದಾಗಿರುವ ಹಿನ್ನೆಲೆ ಕಳೆದ ಸಮ್ಮಿಶ್ರ ಸರ್ಕಾರದ ಕೆಲವೊಂದು ಯೋಜನೆಗಳನ್ನು ಕೈಬಿಡಲು ಬಿಜೆಪಿ ಸರ್ಕಾರ ನಿರ್ಧರಿಸಿದೆಯಂತೆ. ಇದರಲ್ಲಿ ಬಡವರ ಬಂಧು ಯೋಜನೆಯು ಸಹ ಒಂದಾಗಿದೆ ಎಂದು ಹೇಳಲಾಗಿದೆ.
ಏನಿದು ಬಡವರ ಬಂಧು ಯೋಜನೆ?
ಬಿಬಿಎಂಪಿ ವ್ಯಾಪ್ತಿಯ ವ್ಯಾಪಾರಿಗಳಿಗೆ 5 ಸಾವಿರ ರೂ., ಬಳ್ಳಾರಿ, ಬೆಳಗಾವಿ, ದಾವಣಗೆರೆ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ವಿಜಯಪುರ, ತುಮಕೂರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವ್ಯಾಪಾರಿಗಳಿಗೆ 3 ಸಾವಿರ ರೂ. ಮತ್ತು ಇತರೆ ನಗರ ಪ್ರದೇಶಗಳಿಗೆ 1 ಸಾವಿರ ರೂ. ಸಾಲವನ್ನು ಬಡವರ ಬಂಧು ಯೋಜನೆ ಮೂಲಕ ನೀಡಲಾಗುತ್ತಿದೆ. ಶೂನ್ಯ ಬಡ್ಡಿ ದರದ ಸಾಲವು ಇದಾಗಿದ್ದು, ಪ್ರತಿದಿನ 2 ಸಾವಿರ ರೂ. ನಿಂದ 10 ಸಾವಿರ ರೂ. ವರೆಗೆ ಸಾಲ ಪಡೆದು 100 ದಿನದಲ್ಲಿ ಅದನ್ನು ಹಿಂತಿರುಗಿಸುವುದು ಯೋಜನೆ ಉದ್ದೇಶವಾಗಿದೆ. ತಳ್ಳುವ ಗಾಡಿ ಹೊಂದಿರುವ ವ್ಯಾಪಾರಿಗಳು, ಮೋಟಾರ್ ವಾಹನದಲ್ಲಿ ಪಾನೀಯ, ಊಟ, ತಿಂಡಿ, ಸಿಹಿ ಪದಾರ್ಥ ಮಾರಾಟ ಮಾಡುವವರು, ಹಣ್ಣು-ಹೂವು, ತರಕಾರಿ ಮಾರುವವರು, ರಸ್ತೆ ಬದಿ ಬುಟ್ಟಿ ವ್ಯಾಪಾರಿಗಳು, ಪಾದರಕ್ಷೆ ಸೇರಿದಂತೆ ಚರ್ಮದ ಉತ್ಪನ್ನಗಳ ರಿಪೇರಿ, ಮಾರಾಟ ಮಾಡುವವರು, ಆಟದ ಸಾಮಾನುಗಳು ಮತ್ತು ಇತರೆ ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು ಬಡವರ ಬಂಧು ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ.
ಯೋಜನೆಯ ಸ್ಥಿತಿಗತಿ ಈಗ ಹೇಗಿದೆ?
ಯೋಜನೆ ಜಾರಿಯಾದ ಮೊದಲ ಐದು ತಿಂಗಳಲ್ಲಿ 15,200 ಜನರು ಒಟ್ಟು 9 ಕೋಟಿ ರೂ. ಸಾಲ ಪಡೆದಿದ್ದರು. ಆದರೆ, ಬಿಜೆಪಿ ಸರ್ಕಾರ ಬಂದಾಗಿನಿಂದ ಯೋಜನೆ ತನ್ನ ವೇಗ ಕಳೆದುಕೊಂಡಿದೆ. ಯೋಜನೆ ಜಾರಿಯಾದ 2018-19ನೇ ಸಾಲಿನಲ್ಲಿ 50 ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಕಿರುಸಾಲ ನೀಡುವ ಗುರಿ ಹೊಂದಲಾಗಿತ್ತು. 2019ರ ಮೇ ತಿಂಗಳ ಬಳಿಕ ಡಿಸೆಂಬರ್ ತಿಂಗಳವರೆಗೆ ಕೇವಲ 2,669 ಮಂದಿ 2 ಕೋಟಿ ರೂ. ನಷ್ಟು ಸಾಲ ಪಡೆದುಕೊಂಡಿದ್ದಾರೆ. ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಯೋಜನೆ ಪಡೆದುಕೊಂಡಿದ್ದ ವೇಗ ಬಿಜೆಪಿ ಅಸ್ತಿತ್ವಕ್ಕೆ ಬಂದ ಬಳಿಕ ಕುಂಠಿತವಾಗಿದೆ. ತರುವಾಯ ಯೋಜನೆಗೆ ಸಮರ್ಪಕವಾಗಿ ಹಣ ಬಿಡುಗಡೆಯಾಗದೆ ಹಂತಹಂತವಾಗಿ ಕುಂಟಿತವಾಗಿದೆ.