ಬೆಂಗಳೂರು: ಮಂಗಳೂರು ಗಲಭೆಗೆ ನೇರವಾಗಿ ಯು.ಟಿ. ಖಾದರ್ ಪ್ರಚೋದನೆಯೇ ಕಾರಣವಾಗಿದ್ದು, ಅವರನ್ನು ಬಂಧಿಸುವಂತೆ ಬಿಜೆಪಿ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, 144 ನೇ ಸೆಕ್ಷನ್ ಉಲ್ಲಂಘಿಸಿ, ಜನರನ್ನು ಪ್ರಚೋದಿಸಿದ ರಾಮಚಂದ್ರಗುಹಾ ವಿರುದ್ಧವೂ ಕಾನೂನು ಕ್ರಮ ಜರುಗಿಸಬೇಕು. ಹೆಣ್ಣಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳಾದಾಗ ಮಾತ್ರ ತೆಪ್ಪಗಿರುವ ರಾಮಚಂದ್ರ ಗುಹಾ ತರದವರು ಈಗ ಮಾತ್ರ ಬೀದಿಗಿಳಿಯುತ್ತಾರೆ. ಬೇಕಾದರೆ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬುದ್ಧಿಜೀವಿಗಳು ಮತ್ತು ರಾಜಕೀಯ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಜನರ ಭಾವನೆಗಳನ್ನು ಕೆರಳಿಸಿ ಅವರನ್ನು ಪ್ರಚೋದಿಸಲಾಗುತ್ತಿದೆ. ಯು ಟಿ ಖಾದರ್ ಅವರು ಈ ಕಾಯ್ದೆಯನ್ನು ಸರಿಯಾಗಿ ತಿಳಿದುಕೊಳ್ಳದೇ ಪ್ರಚೋದನಾಕಾರಿ ಹೇಳಿಕೆ ಕೊಟ್ಟಿದ್ದಾರೆ. ಕೂಡಲೇ ಸರ್ಕಾರ ಯು.ಟಿ. ಖಾದರ್ ಅವರನ್ನು ಬಂಧಿಸಬೇಕೆಂದು ನಾರಾಯಣ ಸ್ವಾಮಿ ಆಗ್ರಹಿಸಿದರು.
ರಾಮಚಂದ್ರ ಗುಹಾ ಅವರಂತಹ ಹಿರಿಯರೂ ಇದರಲ್ಲಿ ಪಾಲ್ಗೊಳ್ಳುತ್ತಿರೋದು ವಿಷಾದದ ಸಂಗತಿ. ಪಾಕಿಸ್ತಾನ ಬಾಂಗ್ಲಾದೇಶ, ಆಫ್ಘಾನಿಸ್ತಾನಗಳಲ್ಲಿ ದೌರ್ಜನ್ಯಕ್ಕೆ ಒಳಗಾದವರಿಗೆ ಪೌರತ್ವ ಕೊಡುವ ಕಾಯ್ದೆ ಇದು. ರಾಮಚಂದ್ರ ಗುಹಾ ಅಂತಹವರು ಚರ್ಚೆಗೆ ಬೇಕಾದ್ರೆ ಬರಲಿ. ನಾವು ಚರ್ಚೆಗೆ ಸಿದ್ಧ ಎಂದರು.