ಬೆಂಗಳೂರು: ಅಮೆರಿಕಾದಲ್ಲಿ ಹೆಚ್ಚಾಗಿರುವ ಕೊರೊನಾ ಹೊಸ ರೂಪಾಂತರಿ ಎಕ್ಸ್ ಬಿಬಿ 1.5 ಉಪತಳಿ ಗುಜರಾತ್, ರಾಜಸ್ಥಾನದಲ್ಲಿ ಕಾಣಿಸಿಕೊಂಡ ನಂತರ ಈಗ ಕರ್ನಾಟಕದಲ್ಲೂ ಈ ತಳಿ ಪತ್ತೆಯಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಚೀನಾದಲ್ಲಿ ಕಾಣಿಸಿಕೊಂಡಿರುವ ಬಿಎಫ್.7 ದೇಶದಲ್ಲಿ ಹರಡದಂತೆ ತಡೆಯಲು ಎಲ್ಲ ಮುನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ನಡುವೆ ಒಮಿಕ್ರಾನ್ನ ರೂಪಾಂತರಿ ಎಕ್ಸ್ ಬಿಬಿ 1.5 ಭಾರತ ದೇಶದಲ್ಲಿ ಕಾಣಿಸಿಕೊಂಡಿದೆ. ಈ ಹೊಸ ರೂಪಾಂತರಿ ವೈರಸ್ ಕರ್ನಾಟಕದ ಒಬ್ಬರಲ್ಲಿ ಮಾತ್ರ ಕಾಣಿಸಿಕೊಂಡಿರುವುದರಿಂದ ಆರೋಗ್ಯ ಇಲಾಖೆ ಸೋಂಕು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುತ್ತಿದೆ.
ಇನ್ನು, ದೇಶದಲ್ಲಿ ಒಮಿಕ್ರಾನ್ ಉಪತಳಿ ಬಿಎಫ್.7 ತಡೆಯಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿತ್ತು. ಥಿಯೇಟರ್, ಮಾಲ್, ಬಸ್, ಮೆಟ್ರೋಗಳಲ್ಲಿ ಮಾಸ್ಕ್‌ನ್ನು ಹಾಕುವುದನ್ನು ಕಡ್ಡಾಯಗೊಳಿಸಲಾಗಿತ್ತು. ಈಗ ಮತ್ತೊಂದು ಕೊರೊನಾ ಉಪತಳಿ ಎಕ್ಸ್ ಬಿಬಿ 1.5 ಪತ್ತೆಯಾಗಿದೆ. ಇದರ ತಡೆಗೆ ಈಗ ಸರ್ಕಾರ ಮತ್ತಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ.
ಈ ಬಗ್ಗೆ ಮಾತನಾಡಿದ ಮಣಿಪಾಲ ಆಸ್ಪತ್ರೆಯ ಹೆಚ್ಒಡಿ ಮತ್ತು ಸ್ಲೀಪ್ ಫಿಸಿಶಿಯನ್ ಡಾ. ಸತ್ಯನಾರಾಯಣ ಮಾತನಾಡಿ ‘‘ಎಕ್ಸ್ ಬಿಬಿ 1.5 ರೂಪಾಂತರಿ ಜನರಿಗೆ ಅಂತಹ ದೊಡ್ಡ ಸಮಸ್ಯೆ ಆಗುವುದಿಲ್ಲ. ನಮ್ಮಲ್ಲಿರುವ ರೋಗಿಗಳಲ್ಲಿ ಇದು ಮಾಮೂಲಿ ಫ್ಲೂ ಗಿಂತ ಜಾಸ್ತಿ ತೊಂದರೆಯನ್ನು ಉಂಟು ಮಾಡಿಲ್ಲ. ಕೋವಿಡ್ ನಿಯಮಗಳನ್ನು ಪಾಲನೆ ಮಾಡುವುದು, ಮಾಸ್ಕ್ ಧರಿಸುವುದು ಉತ್ತಮ. ಹಾಗೇ ಈ ಹೊಸ ರೂಪಾಂತರಿಗಳಿಗೆ ಹೆದರುವ ಪ್ರಮೇಯ ಇಲ್ಲ. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯಿಂದ ನಿರಂತರವಾಗಿ ಇದರ ಬಗ್ಗೆ ಸೂಕ್ತ ಸಮಯದಲ್ಲಿ ಮಾಹಿತಿ ಸಿಗಲಿದೆ' ಎಂದು 'ಈಟಿವಿ ಭಾರತ'ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ರೈಲ್ವೇ ನಿಲ್ದಾಣದ ಡ್ರಮ್ವೊಂದರಲ್ಲಿ ವಿವಾಹಿತ ಮಹಿಳೆಯ ಶವ ಪತ್ತೆ!