ಬೆಂಗಳೂರು: ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳೂರಿಗೆ ತೆರಳಲು 2 ಸಾರಿ ಪ್ರಯತ್ನಿಸಿದರು. ಆದರೆ, ಅವರ ಭೇಟಿಗೆ ಪೊಲೀಸರು ನಿರ್ಬಂಧಿಸಿದ್ದರು. ಈ ಹಿನ್ನೆಲೆ ನಾಳೆ ಮಂಗಳೂರು ಪ್ರವಾಸ ಕೈಗೊಳ್ಳಲಿದ್ದಾರೆ.
ಪೌರತ್ವ ಕಾಯ್ದೆ ಖಂಡಿಸಿ ಮಂಗಳೂರಿನಲ್ಲಿ ಸಾಕಷ್ಟು ಗಲಾಟೆ ನಡೆದು, ಗೋಲಿಬಾರ್ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ಕೊಡಲು ಮುಂದಾಗಿದ್ದರು. ಆದರೆ, ಇವರ ಯತ್ನವನ್ನು ಸರ್ಕಾರ ಎರಡು ಸಾರಿ ತಡೆದಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ತೆರಳಬೇಕಿತ್ತು. ಆದರೆ, ಮಂಗಳೂರಿನಲ್ಲಿ ವಿಶೇಷ ವಿಮಾನ ಇಳಿಯಲು ಅನುಮತಿ ನಿರಾಕರಿಸಲಾಗಿತ್ತು. ಆದ್ದರಿಂದ ಸಿದ್ದರಾಮಯ್ಯ ಅವರ ಪ್ರವಾಸ ರದ್ದಾಗಿತ್ತು.
ಕಳೆದ ಶನಿವಾರ ಕೂಡ ಮಂಗಳೂರು ಭೇಟಿಗೆ ಮತ್ತೆ ನಿರ್ಬಂಧ ವಿಧಿಸಲಾಗಿತ್ತು. ಈ ಹಿನ್ನೆಲೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಾಕಷ್ಟು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಮತ್ತೆ ಮೂರನೇ ಯತ್ನವಾಗಿ ನಾಳೆ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಬೆಳೆಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಬೆಳಗ್ಗೆ 11ಕ್ಕೆ ವಿಶೇಷ ವಿಮಾನ ಮೂಲಕ ಎಎಚ್ಎಎಲ್ ವಿಮಾನ ನಿಲ್ದಾಣದಿಂದ ಹೊರಟು 12ಕ್ಕೆ ಮಂಗಳೂರು ತಲುಪಿ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಯವರೆಗೆ ಅಲ್ಲಿಯೇ ಇದ್ದು ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟು ಸಂಜೆ 6ಕ್ಕೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಪ್ರತಿಪಕ್ಷದ ನಾಯಕನಾಗಿ ತಮಗೆ ಮಂಗಳೂರಿಗೆ ತೆರಳಲು ಅವಕಾಶ ಕೂಡ ಇಲ್ಲವೇ ಎಂದು ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ನಾಳೆಯಾದರೂ ತೆರಳಲು ಸರ್ಕಾರ ಅವಕಾಶ ನೀಡುವುದೇ ಎನ್ನುವುದನ್ನು ಕಾದು ನೋಡಬೇಕಿದೆ.