ಬೆಂಗಳೂರು: ಚೀನಾ ದೇಶದಿಂದ ಹೊರ ಬರುತ್ತಿರುವ ಕಂಪನಿಗಳನ್ನು ರಾಜ್ಯಕ್ಕೆ ಸೆಳೆಯುವ ದೃಷ್ಟಿಯಿಂದ ರಾಜ್ಯ ಸರ್ಕಾರ ವಿಶೇಷ ಹೂಡಿಕೆ ಪ್ರೋತ್ಸಾಹ ಕಾರ್ಯಪಡೆಯನ್ನು ರಚಿಸಿದೆ.
ಕೊರೊನಾ ಜನಕ ಚೀನಾ ದೇಶದಿಂದ ಈಗಾಗಲೇ ಹಲವು ಕಂಪನಿಗಳು ಹೊರಬರಲು ಮುಂದಾಗಿವೆ. ಈ ಸಂಬಂಧ ಹಲವು ಕಂಪನಿಗಳು ತಮ್ಮ ಇಂಗಿತ ವ್ಯಕ್ತಪಡಿಸಿವೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ರಾಜ್ಯ ಸರ್ಕಾರ ಚೀನಾದಿಂದ ಹೊರಬರುವ ಕಂಪನಿಗಳನ್ನು ರಾಜ್ಯಕ್ಕೆ ಕರೆ ತರುವ ನಿಟ್ಟಿನಲ್ಲಿ ಕಾರ್ಯಪಡೆಯನ್ನು ರಚಿಸಿದೆ.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಇತ್ತೀಚೆಗೆ ಈ ಸಂಬಂಧ ಸಭೆ ನಡೆಸಿ ಚರ್ಚಿಸಲಾಗಿತ್ತು. ಅದರಂತೆ ಇದೀಗ ಸ್ಪೆಷಲ್ ಇನ್ವೆಸ್ಟ್ಮೆಂಟ್ ಪ್ರೊಮೋಷನ್ ಟಾಸ್ಕ್ ಫೋರ್ಸ್ ರಚಿಸಿ ಅದೇಶ ಹೊರಡಿಸಲಾಗಿದೆ.
ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಈ ಟಾಸ್ಕ್ ಫೋರ್ಸ್ ಇರಲಿದೆ. ಒಟ್ಟು 15 ಸದಸ್ಯರ ಈ ಟಾಸ್ಕ್ ಫೋರ್ಸ್ನಲ್ಲಿ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಅಧಿಕಾರಿಗಳು ಇರಲಿದ್ದಾರೆ. ಜೊತೆಗೆ ಕರ್ನಾಟಕದಲ್ಲಿನ ಅಮೆರಿಕಾ, ಕೊರಿಯಾ, ತೈವಾನ್, ಫ್ರಾನ್ಸ್ ಹಾಗೂ ಜರ್ಮನಿ ಕಂಪನಿಗಳ ಪ್ರತಿನಿಧಿಗಳು ಕಾರ್ಯಪಡೆಯಲ್ಲಿ ಇರಲಿದ್ದಾರೆ.
ಕಾರ್ಯಪಡೆಯ ಹೊಣೆ ಏನು?:
- ಕೊರೊನಾ ನಂತರ ಸ್ಥಳಾಂತರಗೊಳ್ಳುವ ಸಂಸ್ಥೆಗಳನ್ನು ಕರ್ನಾಟಕಕ್ಕೆ ಸೆಳೆಯುವುದು.
- ಹೂಡಿಕೆ ಸೆಳೆಯಲು ವಿಶೇಷ ಪ್ಯಾಕೇಜ್ಗಳ ರಚನೆ.
- ಹೂಡಿಕೆ ಸೆಳೆಯುವ ನಿಟ್ಟಿನಲ್ಲಿ ಫಾಸ್ಟ್ ಟ್ರಾಕ್ ಕ್ಲೀಯರೆನ್ಸ್ಗೆ ಕ್ರಮ ತೆಗೆದುಕೊಳ್ಳುವುದು.
- ಕರ್ನಾಟಕ ಉತ್ತಮ ಹೂಡಿಕೆ ರಾಜ್ಯ ಎಂಬ ಬಗ್ಗೆ ಪ್ರಚಾರ ಕಾರ್ಯ ಕೈಗೊಳ್ಳುವುದು.