ಬೆಂಗಳೂರು: ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಸೋಂಕಿತರು ಅಥವಾ ಪ್ರಾಥಮಿಕ ಸಂಪರ್ಕಿತರಿದ್ದರೆ ಅವರ ಕ್ವಾರಂಟೈನ್ ಅವಧಿಯನ್ನು ಕೆಲಸದ ಅವಧಿ ಎಂದು ಪರಿಗಣಿಸುವ ಸಂಬಂಧ ನಿಲುವು ತಿಳಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಸುರಕ್ಷಿತವಾಗಿ ಕರ್ತವ್ಯ ನಿರ್ವಹಿಸಲು ಎಸ್ಓಪಿ ರೂಪಿಸುವಂತೆ ಹಾಗೂ ಕಾರ್ಮಿಕರು ಸೋಂಕಿಗೆ ಒಳಗಾದಲ್ಲಿ ಅಥವಾ ಪ್ರಾಥಮಿಕ ಸಂಪರ್ಕಕ್ಕೆ ಬಂದಂತಹ ಸಂದರ್ಭದಲ್ಲಿ ಕ್ವಾರಂಟೈನ್ಗೆ ಒಳಗಾದರೆ ಅವರ ಕ್ವಾರಂಟೈನ್ ಅವಧಿಯನ್ನು ಕೆಲಸದ ಅವಧಿ ಎಂದು ಪರಿಗಣಿಸಲು ಆದೇಶಿಸುವಂತೆ ಕೋರಿ ಎಐಟಿಯುಸಿ ಸಂಘಟನೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಕಾರ್ಮಿಕರ ಸುರಕ್ಷೆತೆಗೆ ಸಂಬಂಧಿಸಿದಂತೆ ಎಸ್ಓಪಿ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದರು. ಮಧ್ಯಪ್ರವೇಶಿಸಿದ ಪೀಠ, ಪ್ರಾಥಮಿಕ ಸಂಪರ್ಕಕ್ಕೆ ಒಳಗಾದ ಕಾರ್ಮಿಕರು ಕ್ವಾರಂಟೈನ್ಗೆ ಒಳಗಾದಲ್ಲಿ ಈ ಅವಧಿಯನ್ನು ಕೆಲಸದ ಅವಧಿ ಎಂದು ಪರಿಗಣಿಸಲು ಸಾಧ್ಯವೇ ಎಂಬುದಕ್ಕೆ ಸಂಬಂಧಿಸಿದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಈ ಕುರಿತು ಸರ್ಕಾರ ತನ್ನ ನಿಲುವು ತಿಳಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿತು.