ಬೆಂಗಳೂರು: ಮಾಲೀಕನಿಗೆ ಮೋಸ ಮಾಡಿ ಹೊಸ ಎಲ್‌ಇಡಿ ಟಿವಿಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿ 3.66 ಲಕ್ಷ ರೂ. ಬೆಲೆ ಬಾಳುವ 20 ಟಿವಿಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲತ ನಾಗೋರ್ ಜಿಲ್ಲೆಯ ದೇವರಾಮ್ ಜಾಟ್ ಬಂಧಿತ ಆರೋಪಿ. ಬಂಡೆಪಾಳ್ಯದ ದುರ್ಗರಾಮ್ ಎಂಬುವರು ಚಂದಾಪುರದಲ್ಲಿ ಹೊಸ ಥಾಮ್ಸನ್ ಟಿವಿ ಶೋರೂಮ್ ತೆರೆಯುವ ಸಲುವಾಗಿ ವಿವಿಧ ಅಳತೆಯ ಟಿವಿಗಳನ್ನು ತೆಗೆದುಕೊಂಡು ತಮ್ಮ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು. ದಾಸರಹಳ್ಳಿಯಲ್ಲಿ ವಾಸವಾಗಿದ್ದ ಆರೋಪಿ ದೇವರಾಮ್ ಕೆಲವು ದಿನಗಳಿಂದ ಸಾಮಾನುಗಳನ್ನು ಸಾಗಿಸುವ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ಟಿವಿಗಳನ್ನು ಬಂಡೆಪಾಳ್ಯದಿಂದ ಚಂದಾಪುರದ ಶೋರೂಮ್‌ಗೆ ಸಾಗಿಸಲು ಆರೋಪಿ ದೇವರಾಮ್‌ಗೆ ಹೇಳಿದ್ದರು.
ಈತ ಟಿವಿಗಳನ್ನು ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಇಳಿಸಿಕೊಂಡು ಮಾರಾಟ ಮಾಡುವ ಸಲುವಾಗಿ ಹೊಂಚು ಹಾಕುತ್ತಿದ್ದ. ಈ ವೇಳೆ ಬಂಡೇಪಾಳ್ಯ ಪೊಲೀಸರು ಆರೋಪಿಯನ್ನು ಹಿಡಿದು ತೀವ್ರ ವಿಚಾರಣೆಗೊಳಪಡಿಸಿ, ಮಾಗಡಿ ರಸ್ತೆ ದಾಸರಹಳ್ಳಿಯ ತನ್ನ ಮನೆಯಲ್ಲಿಟ್ಟಿದ್ದ 3.66 ಲಕ್ಷ ರೂ.ಬೆಲೆ ಬಾಳುವ ವಿವಿಧ ಅಳತೆಯ 20 ಟಿವಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ