Rafael Nadal Retirement: ಸ್ಪೇನ್ ದೇಶದ ದಿಗ್ಗಜ ಆಟಗಾರ ರಾಫೆಲ್ ನಡಾಲ್ ಅವರು ಇಂದು ಟೆನಿಸ್‌ಗೆ ನಿವೃತ್ತಿ ಘೋಷಿಸಿದರು. 22 ಬಾರಿ ಪ್ರತಿಷ್ಟಿತ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ನಡಾಲ್, ಈ ವರ್ಷದ ನವೆಂಬರ್‌ನಲ್ಲಿ ಮಲಗಾದಲ್ಲಿ ನಡೆಯಲಿರುವ ಡೇವಿಸ್ ಕಪ್ ತಮ್ಮ ಅಂತಿಮ ಟೆನಿಸ್ ಟೂರ್ನಿ ಎಂದು ತಿಳಿಸಿದ್ದಾರೆ. ನವೆಂಬರ್ 19ರಿಂದ 21ರವರೆಗೆ ನಡೆಯಲಿರುವ ಡೇವಿಸ್ ಕಪ್ನ ಕ್ವಾರ್ಟರ್ ಫೈನಲ್‌ನಲ್ಲಿ ನಡಾಲ್, ನೆದರ್ಲೆಂಡ್ಸ್ ಸ್ಪರ್ಧಿಯನ್ನು ಎದುರಿಸಲಿದ್ದಾರೆ.
ಈ ಕುರಿತು ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ವೀಡಿಯೊ ಹಂಚಿಕೊಂಡಿರುವ ಅವರು, "ಜೀವನದಲ್ಲಿ ಪ್ರತಿಯೊಂದಕ್ಕೂ ಪ್ರಾರಂಭ ಮತ್ತು ಅಂತ್ಯವಿರುತ್ತದೆ. ಅದರಂತೆ ನನ್ನ ಟೆನಿಸ್ ವೃತ್ತಿಜೀವನವನ್ನು ಕೊನೆಗೊಳಿಸಲು ಸರಿಯಾದ ಸಮಯ ಬಂದಿದೆ ಎಂದು ಭಾವಿಸಿದ್ದೇನೆ. ಡೇವಿಸ್ ಕಪ್ ಫೈನಲ್ ನನ್ನ ವೃತ್ತಿಜೀವನದ ಕೊನೆಯ ಪಂದ್ಯಾವಳಿಯಾಗಿದ್ದು, ಇದರಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಲು ಉತ್ಸುಕನಾಗಿದ್ದೇನೆ" ಎಂದು ಹೇಳಿದ್ದಾರೆ.
ನಡಾಲ್ ಸಾಧನೆ: 2005ರಲ್ಲಿ ನಡೆದ ಫ್ರೆಂಚ್ ಓಪನ್ ಮೂಲಕ ನಡಾಲ್ ಅವರ ಪ್ರಶಸ್ತಿ ಬೇಟೆ ಪ್ರಾರಂಭವಾಯಿತು. 2006, 2007, 2008, 2010, 2011, 2012, 2013, 2014, 2017, 2018, 2019, 2020, 2022ರಲ್ಲಿ ಫ್ರೆಂಚ್ ಓಪನ್ ಗ್ರ್ಯಾಂಡ್‌ಸ್ಲಾಮ್ ವಿಜೇತರಾಗಿ ಹೊರಹೊಮ್ಮಿದರು. ಇದಲ್ಲದೇ ಯುಎಸ್ ಓಪನ್ 4 ಬಾರಿ, ಆಸ್ಟ್ರೇಲಿಯಾ ಓಪನ್ ಮತ್ತು ವಿಂಬಲ್ಡನ್ ಎರಡೆರಡು ಬಾರಿ ಗೆದ್ದಿದ್ದಾರೆ.
ಫ್ರೆಂಚ್ ಓಪನ್ ಎಂದರೆ ನಡಾಲ್, ನಡಾಲ್ ಎಂದರೆ ಫ್ರೆಂಚ್ ಓಪನ್ ಎಂಬಷ್ಟು ಖ್ಯಾತಿ ಪಡೆದಿದ್ದಾರೆ. ಆದರೆ ಇತ್ತೀಚೆಗೆ ನಡೆದ ಫ್ರೆಂಚ್ ಓಪನ್ ಮೊದಲ ಸುತ್ತಿನಲ್ಲೇ ಜ್ವೆರೆವ್ ವಿರುದ್ಧ ಸೋಲು ಕಂಡು ಹೊರಬಿದ್ದಿದ್ದರು. ಕಳೆದ ಒಂದೂವರೆ ವರ್ಷದಿಂದ ಗಾಯದ ಸಮಸ್ಯೆ ಜೊತೆಗೆ ಫಿಟ್‌ನೆಸ್ ಕೊರತೆ ಎದುರಿಸುತ್ತಿದ್ದಾರೆ. ಸೊಂಟ ಮತ್ತು ಕಿಬ್ಬೊಟ್ಟೆಯ ಸ್ನಾಯುವಿನ ಗಾಯದಿಂದಾಗಿ ಜನವರಿ 2023ರಿಂದ ಈವರೆಗೆ ಕೇವಲ 15 ಪಂದ್ಯಗಳನ್ನು ಆಡಿದ್ದು, 8ರಲ್ಲಿ ಗೆಲುವು ಸಾಧಿಸಿದ್ದಾರೆ. ಬಹುಕಾಲದವರೆಗೆ ನಂಬರ್ ಒನ್ ಟೆನಿಸ್ ಆಟಗಾರನಾಗಿದ್ದ ನಡಾಲ್ ಇದೀಗ 275ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇದನ್ನೂ ಓದಿ: ಆ ದಿನ ಧೋನಿ ಮಾತುಗಳನ್ನು ಕಡೆಗಣಿಸಿ ಮೊದಲ ದ್ವಿಶತಕ ಸಿಡಿಸಿದ್ದ ಹಿಟ್ಮ್ಯಾನ್: ಅಷ್ಟಕ್ಕೂ ಅವತ್ತು ಧೋನಿ ಹೇಳಿದ್ದೇನು?