ಬೆಂಗಳೂರು: ಸಂಕಷ್ಟದಲ್ಲಿರುವ ಹಾಗೂ ದೌರ್ಜನ್ಯಕ್ಕೆ ಒಳಗಾಗಿ ನ್ಯಾಯ ಅರಸಿ ಪೊಲೀಸ್ ಠಾಣೆಗಳಿಗೆ ಬರುವ ನೊಂದ ಮಹಿಳೆಯರಿಗೆ ಮಾನಸಿಕವಾಗಿ ಧೈರ್ಯ ತುಂಬಿ, ಸಾಂತ್ವನ ತುಂಬಲು ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಡಿ ಮೂರು ವರ್ಷಗಳ ಹಿಂದೆ ರಾಜಧಾನಿಯ ಎಲ್ಲಾ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿ ಆರಂಭಿಸಲಾಗಿದ್ದ ಮಹಿಳಾ ಹೆಲ್ಪ್ ಡೆಸ್ಕ್ ಹೊಸ ವರ್ಷದಿಂದ ಕಾರ್ಯನಿರ್ವಹಿಸುವುದು ಬಹುತೇಕ ಅನುಮಾನ.
ಪ್ರತಿಯೊಂದು ಠಾಣೆಗಳಲ್ಲಿ ಸ್ವಾಗತ ವಿಭಾಗದಲ್ಲಿ ತರಬೇತಿ ಪಡೆದ ಮಹಿಳಾ ಸಮಾಲೋಚಕಿಯರನ್ನು ಮಹಿಳಾ ಹೆಲ್ಪ್ ಡೆಸ್ಕ್‌ನಲ್ಲಿ ಅಂದರೆ 2021ರಿಂದ 2023ರವರೆಗೆ ಮೂರು ವರ್ಷದವರೆಗೆ ನಿಯೋಜಿಸಲಾಗಿತ್ತು. ಡಿಸೆಂಬರ್ 31ರಂದು ಮೂರು ವರ್ಷದ ಅವಧಿ ಮುಗಿಯಲಿದೆ. ಮಹಿಳಾ ದೂರುದಾರರು ಹಾಗೂ ಪೊಲೀಸರು ನಡುವೆ ಕೊಂಡಿಯಾಗಿದ್ದ 250 ಮಹಿಳಾ ಸಮಾಲೋಚಕಿಯರನ್ನು ಮುಂದಿನ ಜನವರಿ 1ರಿಂದ ಕರ್ತವ್ಯಕ್ಕೆ ಹಾಜರಾಗದಂತೆ ನಗರ ಪೊಲೀಸ್ ಇಲಾಖೆಯಿಂದ ಸುತ್ತೋಲೆ ಕಳುಹಿಸಲಾಗಿದ್ದು, ಇದರ ಪ್ರತಿ 'ಈಟಿವಿ ಭಾರತ್'ಗೆ ಲಭ್ಯವಾಗಿದೆ.
ನಿರ್ಭಯಾ ಯೋಜನೆಯ ಸೇಫ್ ಸಿಟಿ ಪ್ರಾಜೆಕ್ಟ್ ಅಡಿ ನಗರದ ಪೊಲೀಸ್ ಠಾಣೆಗೆ ಇಬ್ಬರಂತೆ ಕಾನೂನು ಸುವ್ಯವಸ್ಥೆಯ ಆಗಿನ 110 ಪೊಲೀಸ್ ಠಾಣೆಗಳಲ್ಲಿ 210 ಮಂದಿ ಹಾಗೂ ನಿಮ್ಹಾನ್ಸ್, ವಿಕ್ಟೋರಿಯಾ, ಬೌರಿಂಗ್ ಸೇರಿದಂತೆ ಇನ್ನಿತರ ಸರ್ಕಾರಿ ಆಸ್ಪತ್ರೆಗಳಿಗೆ ಆ್ಯಸಿಡ್ ದಾಳಿಗೊಳಗಾದ, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಪೋಕ್ಸೊ ಸೇರಿ ಇನ್ನಿತರ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆಯರು ಹಾಗೂ ಮಕ್ಕಳ ಮನೋಬಲ ವೃದ್ದಿಸಿ, ಅವರಿಗೆ ಧೈರ್ಯ ತುಂಬಲು 40 ಮಂದಿ ಸೇರಿ ಒಟ್ಟು 250 ಸಮಾಲೋಚಕಿಯರಿಗೆ ಸೂಕ್ತ ತರಬೇತಿ ನೀಡಿ ಸಿವಿಲ್ ಡಿಫೆನ್ಸ್ ಇಲಾಖೆಯಿಂದ ನಿಯೋಜಿಸಲಾಗಿತ್ತು.
ಇದಕ್ಕಾಗಿ ನಿರ್ಭಯಾ ನಿಧಿಯಿಂದ 200 ಕೋಟಿಗೂ ಹೆಚ್ಚು ಮೀಸಲಿರಿಸಿತ್ತು. ನಗರದ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಹಿಳಾ ಡೆಸ್ಕ್ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಗರ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂತ್ ಚಾಲನೆ ನೀಡಿದ್ದರು. ನಿಗದಿತ ಗಡುವು ಮುಗಿದು ಅನುದಾನ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಎಲ್ಲಾ ಮಹಿಳಾ ಕೌನ್ಸಿಲರ್‌ಗಳನ್ನು ಹುದ್ದೆಯಿಂದ ತೆರವುಗೊಳಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ ಅಂತ್ಯಕ್ಕೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ಸೇರಿ ವಿವಿಧ ಅಪರಾಧ ಪ್ರಕರಣ ಒಳಗೊಂಡಂತೆ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 21,941 ಅಪರಾಧ ಪ್ರಕರಣ ದಾಖಲಾಗಿದೆ. ಕೌಟುಂಬಿಕ ವಲಯದಿಂದಲೇ ಹೆಚ್ಚು ದೌರ್ಜನ್ಯಕ್ಕೆ ಒಳಗಾಗಿದ್ದು, ಈ ಸಂಬಂಧ ನ್ಯಾಯ ಕೋರಿ ಪ್ರತಿನಿತ್ಯ ಠಾಣೆಗೆ ಬರುವ ಸಂತ್ರಸ್ತೆಯರ ಸಂಖ್ಯೆ ಹೆಚ್ಚಾಗಿದ್ದು, ದೂರುದಾರರು ಹಾಗೂ ಪೊಲೀಸರ ನಡುವೆ ಸೇತುವೆಯಾಗಿ ಸಮಾಲೋಚಕಿಯರ ಪಾತ್ರ ದೊಡ್ಡದಾಗಿತ್ತು.
ಪ್ರಾಥಮಿಕ ಹಂತದಲ್ಲಿ ನೊಂದ ಮಹಿಳೆಯರಿಗೆ ಧೈರ್ಯ ತುಂಬಿ ಕಾನೂನಿನ ಬಗ್ಗೆ ತಿಳುವಳಿಕೆ ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದರು. ಪ್ರತಿ ಠಾಣೆಯಲ್ಲಿ ಪಾಳಿಗೆ ಒಬ್ಬರಂತೆ ಎರಡು ಪಾಳಿಯಲ್ಲಿ ಇಬ್ಬರು ಕೌನ್ಸಿಲರ್ ಗಳು ಕಾರ್ಯನಿರ್ವಹಿಸುತ್ತಿದ್ದರು. ಗೌರವಧನವಾಗಿ ಮಾಸಿಕ 15 ಸಾವಿರ ನೀಡಲಾಗುತ್ತಿತ್ತು. ಇದೀಗ ಮೂರು ವರ್ಷದ ಅವಧಿ ಮೀರಿದೆ ಎಂದು ಹೇಳಿ ಕೌನ್ಸಿಲರ್ ಹುದ್ದೆಯಿಂದ ನಿಯೋಜಿಸಲಾಗಿದ್ದ ಎಲ್ಲರಿಗೂ ಜನವರಿ 1ರಿಂದ ಕೆಲಸಕ್ಕೆ ಬರದಂತೆ ಸೂಚಿಸಿದ್ದು, ಇದರಿಂದ ತೊಂದರೆಯಾಗಿದೆ ಎಂದು ಸದ್ಯ ಠಾಣೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಾಲೋಚಕಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
8 ಮಹಿಳಾ ಪೊಲೀಸ್ ಠಾಣೆ ತೆರೆಯಲು ಅನುಮತಿ: ಈ ಬಗ್ಗೆ 'ಈಟಿವಿ ಭಾರತ್'ಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಡಿಸಿಪಿ ಸಂತೋಷ್ ಬಾಬು, ಸೇಫ್ ಸಿಟಿ ಯೋಜನೆಯಡಿ ನಗರ ಪೊಲೀಸ್ ಠಾಣೆಗಳಲ್ಲಿ ಆಪ್ತ ಸಮಾಲೋಚಕಿಯರನ್ನ ಮೂರು ವರ್ಷಕ್ಕೆ ನಿಯೋಜಿಸಲಾಗಿತ್ತು. ಅವಧಿ ಮೀರುತ್ತಿದ್ದು ಮುಂದಿನ ತಿಂಗಳಿಂದ ಕರ್ತವ್ಯಕ್ಕೆ ಬರದಂತೆ ಈಗಾಗಲೇ ಸೂಚಿಸಲಾಗಿದೆ.
ಇದಕ್ಕೆ ಪರ್ಯಾಯವೆಂಬಂತೆ ಸ್ವಯಂಸೇವಾ ಸಂಸ್ಥೆಯಾಗಿರುವ ಪರಿಹಾರ್ ವತಿಯಿಂದ ನೊಂದ ಮಹಿಳೆಯರಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮುಂದುವರೆಸಲಿದೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ಎರಡು ಮಹಿಳಾ ಪೊಲೀಸ್ ಠಾಣೆಗಳ ಜೊತೆಗೆ ವಿಭಾಗಕ್ಕೊಂದರಂತೆ ಒಟ್ಟು ಎಂಟು ಮಹಿಳಾ ಪೊಲೀಸ್ ಠಾಣೆಗಳನ್ನು ಸರ್ಕಾರ ಅನುಮೋದಿಸಿದ್ದು, ಇನ್ನೊಂದು ವಾರದಲ್ಲಿ ಅಧಿಕೃತ ಅಧಿಸೂಚನೆ ಹೊರಡಿಸಲಿದೆ. ಠಾಣೆ ಆರಂಭಗೊಂಡ ಬಳಿಕ ಆಯಾ ಮಹಿಳಾ ಠಾಣೆಗಳಲ್ಲಿ ಮುಂದೆ ಮಹಿಳಾ ಪೊಲೀಸರೇ ನೊಂದ ಮಹಿಳೆಯರ ದೂರು ಸ್ವೀಕರಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಲಿದ್ದಾರೆ ಎಂದರು.
ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎ.ಎಂ.ಬಸವರಾಜು ಅಮಾನತು