ಬೆಂಗಳೂರು: ಮಹಿಳೆಯರ ಸುರಕ್ಷತೆಗಾಗಿ ಕೈ ಜೋಡಿಸಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಮನವಿ ಮಾಡಿದ್ದಾರೆ.
ಬೆಂಗಳೂರು ಹಾಗೂ ಇತರೆಡೆ ಸಂಕಷ್ಟದಲ್ಲಿರುವ 303 ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಆಯೋಗ ಮಾಡಿಕೊಟ್ಟಿದೆ. ಆದರೆ ಮಹಿಳೆಯರ ರಕ್ಷಣೆಗೆ ಪೊಲೀಸರು ಕೂಡ ಸಾಥ್ ನೀಡಬೇಕೆಂದು ಒತ್ತಾಯಿಸಿದ್ದಾರೆ.
ನಗರದ ಎಲ್ಲಾ ವಲಯದ ಡಿಸಿಪಿಗಳ ಜೊತೆ ಸಭೆ ನಡೆಸಲು ಅನುಮತಿ ಕೇಳಿರುವ ಪ್ರಮಿಳಾ ನಾಯ್ಡು, ಪೊಲೀಸರು ಮಹಿಳೆಯರ ಸುರಕ್ಷತೆಗೆ ಮುಂದೆ ಬರಬೇಕು. ಅಲ್ಲದೆ, ಮಹಿಳೆಯರ ರಕ್ಷಣೆಗಾಗಿ ಆ್ಯಪ್ ಬಿಡುಗಡೆ ಮಾಡಬೇಕು ಎಂಬ ಸಲಹೆ ಕೊಟ್ಟರು.
ಈಗಾಗಲೇ ಇರುವ ಸುರಕ್ಷಾ ಆ್ಯಪ್ ಬಗ್ಗೆ ಪ್ರಸ್ತಾಪಿಸಿದ ಕಮಲ್ ಪಂತ್, ಅದನ್ನೇ ಅಪ್‌ಗ್ರೇಡ್ ಮಾಡೋಣ ಎಂದಿದ್ದಾರೆ. ಅಷ್ಟು ಮಾತ್ರವಲ್ಲದೇ ಸದ್ಯದಲ್ಲೇ ಡಿಸಿಪಿಗಳ ಜೊತೆ ಸಭೆ ನಡೆಸುವುದಾಗಿ ಪ್ರಮಿಳಾ ನಾಯ್ಡು ಅವರಿಗೆ ತಿಳಿಸಿದ್ದಾರೆ. ಹಾಗೆಯೇ, ಬೆಂಗಳೂರು ಪೊಲೀಸರು ಮಹಿಳೆಯರ ಸುರಕ್ಷತಾ ಕ್ರಮಕ್ಕೆ ಬೀಟ್ ವ್ಯವಸ್ಥೆ, ಪಿಂಕ್ ಹೊಯ್ಸಳ ಸೇರಿದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.