ಬೆಂಗಳೂರು: ಬೀದರ್ ಜಿಲ್ಲೆಯ ಚಾಂಬೋಳ ಪಂಚಾಯತ್ನ, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿರುವ ಮಂಗಳಾ ಕಾಂಬಳೆ ಸರ್ಕಾರದ ಭ್ರಷ್ಟ ವ್ಯವಸ್ಥೆಯಿಂದ ಆಗಿರುವ ಅನ್ಯಾಯಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿ ನಗರದ ಮೌರ್ಯ ಸರ್ಕಲ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ಕುಳಿತಿದ್ದಾರೆ.
ಆಕ್ಟ್ 1978 ಸಿನಿಮಾದಲ್ಲಿ ಹೇಗೆ ಹೆಣ್ಣೊಬ್ಬಳು ಲಂಚ ನೀಡದೇ ಇಡೀ ಭ್ರಷ್ಟ ವ್ಯವಸ್ಥೆಯ ವಿರುದ್ಧ ಕಡೆಯವರೆಗೂ ಹೋರಾಡುತ್ತಾಳೋ, ಮಂಗಳಾ ಅವರು ಕೂಡಾ ಭ್ರಷ್ಟ ವ್ಯವಸ್ಥೆಗೆ ಹೆದರದೆ, ಲಂಚದ ಆಮಿಷಕ್ಕೆ ಒಳಗಾಗದೆ ಸಾರ್ವಜನಿಕರಿಗೆ, ಸರ್ಕಾರದ ಹಣಕ್ಕೆ ಮೋಸ ಮಾಡದೇ ದುಡಿಯುತ್ತಿದ್ದರು. ಆದರೆ, ಪಿಡಿಒ ಆಗಿದ್ದರೂ ಸ್ಥಳೀಯವಾಗಿ ಕೆಲಸಕ್ಕೆ ಹೋಗಲಾರದ ಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸ್ ವ್ಯವಸ್ಥೆಯೂ ಅವರ ಕೆಲಸಕ್ಕೆ ಅಡ್ಡಿ ಮಾಡಿ, ಭೂಗತ ಪಾತಕಿಗಳನ್ನು ಬಳಸಿಕೊಂಡು ಕ್ರಿನಿನಲ್ ಪಿತೂರಿ ಮಾಡಿ ಅತ್ಯಾಚಾರ ಹಾಗೂ ಕೊಲೆ ಮಾಡಿಸಲು ಸಹ ಪ್ರಯತ್ನ ಪಟ್ಟಿದ್ದಾರೆ. ಇದರ ವಿರುದ್ಧ ಎನ್ಐಎ ತನಿಖೆ ಮಾಡಿ, ಕ್ರಮ ಜರುಗಿಸುವಂತೆ ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.
ಬೀದರ್ನಲ್ಲಿ ಎಂಟು ದಿನ ಉಪವಾಸ ಸತ್ಯಾಗ್ರಹ ನಡೆಸಿ, ಹಲವು ದಿನ ಪ್ರತಿಭಟನೆ ನಡೆಸಿದರೂ ನ್ಯಾಯ ಸಿಗದ ಕಾರಣ ರಾಜಧಾನಿಗೆ ಬಂದು ಪ್ರತಿಭಟನೆ ಕುಳಿತಿದ್ದಾರೆ. ಮಹಿಳಾ ಅಧಿಕಾರಿಯ ಹೋರಾಟಕ್ಕೆ ಕರ್ನಾಟಕ ರಾಷ್ಟ್ರ ಸಮಿತಿಯ ಕಾರ್ಯಕರ್ತರೂ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಒಟ್ಟಿನಲ್ಲಿ ಮಹಿಳೆಯ ಕೂಗು ಇನ್ನಾದ್ರೂ ಸರ್ಕಾರಕ್ಕೆ ಮುಟ್ಟುತ್ತದೆಯಾ, ಮಹಿಳೆಗೆ ನ್ಯಾಯ ಸಿಗುತ್ತಾ ಎಂದು ಕಾದುನೋಡಬೇಕಿದೆ.
ಓದಿ...ಸಭಾಪತಿಗಳು ಯಾವುದೇ ಪಕ್ಷಪಾತ ಮಾಡಿಲ್ಲ, ಜೆಡಿಎಸ್ ಬೆಂಬಲ ನೀಡುವ ವಿಶ್ವಾಸವಿದೆ: ಎಸ್.ಆರ್.ಪಾಟೀಲ್