ಬೆಂಗಳೂರು: ನಗರದ ಕೋರಮಂಗಲದ ವೆಂಕಟಾಪುರದಲ್ಲಿರುವ ಗ್ರಾಮದೇವತೆ ಮಾರಮ್ಮ ದೇವಾಲಯದಲ್ಲಿ ಮಹಿಳೆಯರೇ ಅರ್ಚಕರಾಗಿದ್ದು, ಪ್ರತಿನಿತ್ಯ ದೇವರಿಗೆ ಮಹಿಳೆಯರೇ ಪೂಜೆ ಪುನಸ್ಕಾರ ಮಾಡುತ್ತಾರೆ.
ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಪೂಜಾ ಕೈಂಕರ್ಯಕ್ಕೆ ಅವಕಾಶ ನೀಡಿರುವುದು ವಿಶೇಷ ಜೊತೆಗೆ ಅತಿ ವಿರಳ. ಸುಮಾರು ತೊಂಬತ್ತು ವರ್ಷ ಹಳೆಯದಾದ ಈ ದೇವಾಲಯದಲ್ಲಿ, ಕಳೆದ ಐವತ್ತು ವರ್ಷಗಳಿಂದ ಮಹಿಳೆಯರೇ ಪೂಜೆ ನೆರವೇರಿಸುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ವೇಳೆ ದೇವರಿಗೆ ಪೂಜೆ ನೆರವೇರಿಸಲಾಗುತ್ತದೆ. ಪ್ರತಿ ಶುಕ್ರವಾರದಂದು ದೇವರಿಗೆ ನಿಂಬೆಹಣ್ಣಿನ ಆರತಿ ಮಾಡಲಾಗುತ್ತದೆ. ಹಾಗೂ ಭಕ್ತರು ಹರಕೆಗಳನ್ನು ತೀರಿಸುತ್ತಾರೆ. ತಮ್ಮ ಬೇಡಿಕೆ ಶೀಘ್ರವೇ ಈಡೇರುತ್ತದೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದು.
ಪ್ರತಿವರ್ಷ ಇಲ್ಲಿ ಗ್ರಾಮದೇವತೆ ಉತ್ಸವ ಹಾಗೂ ಹಬ್ಬ ನಡೆಯಲಿದೆ. ನವರಾತ್ರಿ ಸಂದರ್ಭದಲ್ಲಿ 9 ದಿನಗಳ ಕಾಲ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಮಾಡಲಾಗುತ್ತದೆ. ಅಲ್ಲದೆ ಹಬ್ಬದ ದಿನಗಳಂದು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ.ಈ ದೇವಾಲಯದ ಮುಖ್ಯಸ್ಥರಾದ ಸುಂದರಮ್ಮ ಎಂಬುವವರು ಸುಮಾರು 40 ವರ್ಷಗಳಿಂದ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇವರ ಐವರು ಪುತ್ರಿಯರು ಕೂಡ ದೇವಿಯ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಈ ದೇವಸ್ಥಾನಕ್ಕೆ ಆಗಮಿಸುವುದು ಈ ದೇವಾಲಯದ ಮತ್ತೊಂದು ವಿಶೇಷ ಎನ್ನಬಹುದು.