ಬೆಂಗಳೂರು: ಜ.20 ರಂದು ನಡೆದ ರೈತ ಧ್ವನಿ ಬೃಹತ್ ಪ್ರತಿಭಟನೆಯಿಂದ ಕಂಗಾಲಾಗಿರುವ ರಾಜ್ಯ ಸರ್ಕಾರ, ಜನರ ಆಕ್ರೋಶದ ದಿಕ್ಕು ತಪ್ಪಿಸಲು ಶಾಸಕಿ ಸೌಮ್ಯ ರೆಡ್ಡಿ ಅವರ ವಿರುದ್ಧ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅಭಿಪ್ರಾಯಪಟ್ಟಿದ್ದಾರೆ.
ಓದಿ: ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ: ಮತ್ತೊಬ್ಬ ಪ್ರಮುಖ ಆರೋಪಿ ಬಂಧನ
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ದೇಶದ ಮತ್ತು ರಾಜ್ಯದ ರೈತರು ಮೂರು ಕೃಷಿ ಕಾಯ್ದೆಗಳ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಅಭೂತಪೂರ್ವ ಹೋರಾಟದಿಂದ ಗೊಂದಲಕ್ಕೆ ಸಿಲುಕಿರುವ, ವಿಚಲಿತರಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಕೈ ಗೊಂಬೆಗಳಾಗಿರುವ ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಪ್ರತಿಭಟನೆಯ ಯಶಸ್ಸನ್ನು ದಿಕ್ಕು ತಪ್ಪಿಸಲು ಈ ರೀತಿಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.
ಶಾಸಕಿ ಸೌಮ್ಯ ರೆಡ್ಡಿಯನ್ನು ಗುರಿಯಾಗಿಸಿಕೊಂಡು ಅವರ ತೇಜೋವಧೆ ಮಾಡುವ ಮತ್ತು ಬೆಂಗಳೂರು ಜನರನ್ನು ಗೊಂದಲಕ್ಕೆ ಸಿಲುಕಿಸುವ ದುರುದ್ದೇಶದಿಂದ ಸುಳ್ಳು ಆರೋಪಗಳನ್ನು ಯಡಿಯೂರಪ್ಪ ಸರ್ಕಾರ ಮಾಡುತ್ತಿದೆ ಎಂದು ದೂರಿದ್ದಾರೆ.
ಪ್ರತಿಭಟನೆಗಳಲ್ಲಿ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವುದು ಕಾನೂನಾತ್ಮವಾದ ಸಾಮಾನ್ಯ ಪ್ರಕ್ರಿಯೆ. ಬಿಜೆಪಿ ಸರ್ಕಾರದ ಅನೇಕ ಜನ ಶಾಸಕರು, ಮಂತ್ರಿಗಳು ಸಹ ಇದೇ ರೀತಿ ಪ್ರತಿಭಟನೆಗಳನ್ನು ಮಾಡಿ ಅಭ್ಯಾಸ ಇರುವವರೇ. ಬಿಜೆಪಿ ಪಕ್ಷದ ಸಂಸದ ಪ್ರತಾಪ್ ಸಿಂಹ ಪೊಲೀಸ್ ನಾಕಾ ಬಂದಿಯನ್ನು ಕಾಲಿನಲ್ಲಿ ಒದ್ದು ಪೊಲೀಸರ ಮೇಲೆ ವಾಹನವನ್ನು ಹತ್ತಿಸಿಕೊಂಡು ಹೋದ ಪ್ರಕರಣ ನಮ್ಮ ಕಣ್ಣ ಮುಂದಿದೆ.
ಸಚಿವ ಮಾಧುಸ್ವಾಮಿ ಸರ್ಕಾರದ ಆಧಿಕಾರಿಗಳಿಗೆ ಕಪಾಳಕ್ಕೆ ಬಾರಿಸುವುದಾಗಿ ಹೇಳಿರುವುದು ಕೂಡ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಬಿಜೆಪಿಯ ಮಂತ್ರಿಗಳು ಮತ್ತು ಶಾಸಕರು ಸ್ವತಃ ತಾವೇ ಕಾನೂನು ಉಲ್ಲಂಘನೆ ಮಾಡುವುದರಲ್ಲಿ ನಿಸ್ಲಿಮರಾಗಿದ್ದು, ತಮ್ಮ ಅನುಭವವನ್ನು ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಆರೋಪಿಸುವ ನೀಚ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಇದೀಗ ಶಾಸಕಿ ಮೇಲೆ ದೂರು ದಾಖಲಿಸಿರುವ ಸರ್ಕಾರದ ಕುತಂತ್ರಗಳಿಗೆ ರಾಜ್ಯದ ಜನತೆ ಸೊಪ್ಪು ಹಾಕುವುದಿಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ದೂರು ದಾಖಲಿಸುವುದಲ್ಲದೇ, ಖ್ಯಾತ ಸಾಹಿತಿ ಹಂಪ ನಾಗರಾಜ್ ಅವರ ಮೇಲೆ ಯಾರೋ ಒಬ್ಬ ಮೂರನೇ ದರ್ಜೆ ವ್ಯಕ್ತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಗೆ ಕರೆಸಿಕೊಂಡಿರುವುದು ನಾಡಿನ ಸಾರಸ್ವತ ಲೋಕಕ್ಕೆ ಮಾಡಿರುವ ಅವಮಾನ. ಯಡಿಯೂರಪ್ಪ ಸರ್ಕಾರ ಅಧಿಕಾರಿಗಳ ಮೇಲೆ, ಆಡಳಿತ ಯಂತ್ರದ ಮೇಲೆ ನಿಯಂತ್ರಣ ಹೊಂದಿಲ್ಲದೆ, ಜನರ ಧ್ವನಿಯನ್ನು ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಳ್ಳುತ್ತಿದೆ ಎಂದಿದ್ದಾರೆ.
ಯಡಿಯೂರಪ್ಪ ಸರ್ಕಾರ ರಾಜ್ಯವನ್ನು ಗೂಂಡಾಗಿರಿ ಮತ್ತು ಪೊಲೀಸ್ ಅಧಿಕಾರಿಗಳ ಮೂಲಕ ಹಿಡಿತದಲ್ಲಿಟ್ಟುಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿರುವುದನ್ನು ಮಹಿಳಾ ಕಾಂಗ್ರೆಸ್ ಖಂಡಿಸುತ್ತದೆ. ಶಾಸಕಿ ಸೌಮ್ಯ ರೆಡ್ಡಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಕಾನೂನಿನ ಮುಂದೆ ನ್ಯಾಯಾಲಯದಲ್ಲಿ ನಿಸ್ಸಂಶಯವಾಗಿ, ನಿರಪರಾಧಿಯಾಗಿ ಹೊರಬರುತ್ತಾರೆ. ಯಡಿಯೂರಪ್ಪ ಮತ್ತು ಬಿಜೆಪಿ ಪಕ್ಷದ ದುರಾಡಳಿತಕ್ಕೆ ರಾಜ್ಯದ ಜನತೆ, ರೈತರು, ಕಾರ್ಮಿಕರು, ಮಹಿಳೆಯರು ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದ್ದಾರೆ.