ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ನೋಡಿಕೊಳ್ಳಲು ನಿಯೋಜಿಸಿದ್ದ ನರ್ಸ್ ಒಬ್ಬಳು, ಮಾಲೀಕನ ಮನೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಕಳ್ಳತನ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಮನೆ ಮಾಲೀಕರಾದ ನಿವೃತ್ತ ಹೆಡ್ ಮಾಸ್ಟರ್ ಮೇಲೂರಪ್ಪ ಎಂಬುವರು ನೀಡಿದ ದೂರಿನ ಮೇರೆಗೆ ಪವಿತ್ರ ಎಂಬುವರನ್ನು ಬಂಧಿಸಲಾಗಿದೆ.
ಅಮೃತಹಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟಪ್ಪ ಬಡಾವಣೆಯಲ್ಲಿ ಮೇಲೂರಪ್ಪ ವಾಸವಾಗಿದ್ದಾರೆ. ಇವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರು. ಹೆಂಡತಿಯನ್ನು ನೋಡಿಕೊಳ್ಳುವ ಸಲುವಾಗಿ ಡಿ ನೋವಾ ಏಜೆನ್ಸಿ ಕಡೆಯಿಂದ ಆರೈಕೆ ಮಾಡಲು ದಾದಿಯನ್ನು ಮನೆ ಮಾಲೀಕರು ನೇಮಿಸಿದ್ದರು.
ಕೇರ್‌ಟೇಕರ್ ಆಗಿ ಬಂದವಳ ಕಣ್ಣು ಅದರ ಮೇಲೆ.. : ಡಿಸೆಂಬರ್ 10 ರಂದು ಪವಿತ್ರ ಎಂಬುವರನ್ನು ಮನೆಗೆ ಕರೆತಂದಿದ್ದರು. ಮೂರ್ನಾಲ್ಕು ದಿನ ಕೆಲಸ ಮಾಡಿದ್ದ ನರ್ಸ್ ಮನೆಯಲ್ಲಿದ್ದ 4 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಕದ್ದು ಎಸ್ಕೇಪ್ ಆಗಿದ್ದಳು. ಸದ್ಯ ಆ ಖತರ್ನಾಕ್ ನರ್ಸ್‌ಳನ್ನ ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಮೇಲೂರಪ್ಪ ಅವರ ಮನೆಗೆ ಕೇರ್ ಟೇಕರ್ ಆಗಿ ಬಂದಿದ್ದ ನರ್ಸ್ ಪವಿತ್ರ ತನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ದಳು. ಈ ವೇಳೆ ಹೆಡ್ ಮಾಸ್ಟರ್ ದೊಡ್ಡ ಪುತ್ರಿ ಮನೆಯ ಕಬೋರ್ಡ್‌ನಲ್ಲಿ ಚಿನ್ನ ಇಟ್ಟಿದ್ದೀನಿ ಎಂದು ತನ್ನ ತಾಯಿಗೆ ಹೇಳಿ ಊರಿಗೆ ಹೋಗಿದ್ದಳು.
ಇದನ್ನ ಕೇಳಿಸಿಕೊಂಡಿದ್ದ ನರ್ಸ್ ಅದೇ ದಿನ ಕಬೋರ್ಡ್‌ನಲ್ಲಿದ್ದ ನಾಲ್ಕು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನ ಕದ್ದಿದ್ದಾಳೆ. ಆದರೆ, ಮನೆಯಿಂದ ಹೊರ ಹೋಗಬೇಕಾದರೆ ಇಲ್ಲಸಲ್ಲದ ನಾಟಕ ಶುರು ಮಾಡಿದ್ದ ನರ್ಸ್, ಜೋರಾಗಿ ಅಳುವುದಕ್ಕೆ ಶುರು ಮಾಡಿದ್ದಾಳೆ.
ಅಮ್ಮನಿಗೆ ಹುಷಾರಿಲ್ಲ ಎಂದ್ಹೇಳಿದ ಅಮ್ಮಣ್ಣಿ: ಪಾಪ ಹೆಣ್ಣು ಮಗು ಯಾಕೋ ಅಳುತ್ತಿದ್ದಾಳೆ ಎಂದು ಮೇಲೂರಪ್ಪ ಅವಳನ್ನ ವಿಚಾರಿಸಿದಾಗ ಊರಲ್ಲಿ ಅಮ್ಮ ಮೇಲಿಂದ ಬಿದ್ದಿದ್ದಾರಂತೆ, ಹುಷಾರಿಲ್ಲ ನಾನೀಗಲೇ ಹೋಗಬೇಕು ಎಂದು ಕಣ್ಣೀರಿಟ್ಟಿದ್ದಾಳೆ. ಈ ವೇಳೆ ಹೆಣ್ಣು ಮಗು ಎಂದು ಆಕೆಗೆ 1,500 ರೂಪಾಯಿ ಖರ್ಚಿಗೂ ಕೊಟ್ಟು ಕಳಿಸಿಕೊಟ್ಟಿದ್ದಾರೆ. ಆದರೆ, ಚಿನ್ನದ ಬಗ್ಗೆ ಮರೆತಿದ್ದ ಮನೆ ಮಾಲೀಕರು ನರ್ಸ್ ಕಣ್ಣೀರಿನ ಕಥೆ ಕೇಳಿ ಅಯ್ಯೋ ಎಂದುಕೊಂಡಿದ್ದರು.
ತಾಯಿಗೆ ಹುಷಾರಿಲ್ಲ ಎಂದು ಊರಿಗೆ ಹೋಗಿದ್ದ ನರ್ಸ್ ಪ್ರತಿ ದಿನವೂ ಕರೆ ಮಾಡಿ ಮಾಲೀಕನ ಪತ್ನಿಯ ಬಗ್ಗೆ ವಿಚಾರಿಸಿದ್ದಳು. ಹೀಗೆ ಒಂದು ಕಡೆ ಚಿನ್ನಾಭರಣಗಳ ಬಗ್ಗೆ ಮನೆಯವರು ಮರೆತ್ತಿದ್ರೆ, ಅತ್ತ ನರ್ಸ್ ಮನೆಯಲ್ಲಿ ಕಳ್ಳತನ ಆಗಿರುವುದು ಗೊತ್ತಾಗಿಲ್ಲ ಎಂದು ಮೂರ್ನಾಲ್ಕು ದಿನದ ನಂತರ ಮತ್ತೆ ಬಂದಿದ್ದಾಳೆ. ಆದ್ರೆ, ಬಂದ ನಂತರ ಆಕೆಯ ಸ್ಟೈಲೇ ಚೇಂಜ್ ಆಗಿತ್ತು.
ಹೆಂಗಿದ್ದವಳು ಹಿಂಗಾಗ್ಬಿಟ್ಟಳು : ಕೆಲಸಕ್ಕೆ ಎಂದು ಶುರುವಿಗೆ ಮನೆಗೆ ಬಂದಿದ್ದ ನರ್ಸ್ ಕೀ ಪ್ಯಾಡ್ ಮೊಬೈಲ್, ಮಾಮೂಲಿ ಡ್ರೆಸ್ ಅಲ್ಲಿ ಬಂದಿದ್ದಾಕೆ, ಊರಿಗೆ ಹೋಗಿ ಬಂದವಳೇ ಹೊಸ ಸ್ಮಾರ್ಟ್ ಫೋನ್, ಹೊಸ ಡ್ರೆಸ್ ಹಾಕಿಕೊಂಡಿದ್ದಳು. ಮತ್ತೊಂದೆಡೆ ಸಂಬಂಧಿಕರು ಕೂಡ ಹೆಡ್ ಮಾಸ್ಟರ್ ಮನೆಗೆ ಬಂದಿದ್ದಾರೆ. ಈ ವೇಳೆ ಮನೆ ಮಾಲೀಕನ ಪತ್ನಿಗೆ ಅಮ್ಮಾ ಏನಿದು ಬರೀ ಕೊರಳಲ್ಲಿದ್ದೀರಾ.. ಆಭರಣಗಳೆಲ್ಲಾ ಎಲ್ಲಿ?. ನೆಕ್ಲೆಸ್‌ಗಳನ್ನ ಹಾಕಿ ಎಂದು ಸಂಬಂಧಿಕರು ಹೇಳಿದ್ದಾರೆ.
ಎದೆ ನೋವು ಎಂದ ನಾಟಕ ಮಾಡಿದಳು : ಈ ಮಾತನ್ನು ಹೇಳಿದ್ದೆ ತಡ ನರ್ಸ್ ತಾನು ಕಳ್ಳತನ ಮಾಡಿರುವುದು ನೆನಪಾಗಿ ಎದೆ ನೋವು ಎಂದು ನಾಟಕ ಶುರು ಮಾಡಿದ್ದಾಳೆ. ನಂತರ ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚೆಕ್ ಮಾಡಿಸಿದ್ದಾಗೆ ಏನೂ ಆಗಿಲ್ಲ ಎಂದು ಡಾಕ್ಟರ್ ಹೇಳಿ ಮನೆಗೆ ಕಳಿಸಿದ್ದಾರೆ. ಈ ವೇಳೆ ಅಲ್ಲಿಂದ ನರ್ಸ್ ಎಸ್ಕೇಪ್ ಆಗಿದ್ದಳು. ಆದರೆ, ಮನೆಗೆ ಬಂದು ಮಾಲೀಕರು ಕಬೋರ್ಡ್ ನೋಡಿದಾಗ ಅಲ್ಲಿದ್ದ ಚಿನ್ನಾಭರಣ ಎಲ್ಲವೂ ಮಾಯವಾಗಿತ್ತು.
ಇನ್ನು ಊರಿಗೆ ಹೋಗಿ ಬಂದಿದ್ದವಳ ನಡವಳಿಕೆ ಗಮನಿಸಿದ್ದ ಮನೆ ಮಾಲೀಕರು, ನರ್ಸ್ ಮೇಲೆ ಡೌಟ್ ಬಂದು ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಅಮೃತಹಳ್ಳಿ ಪೊಲೀಸರು ಆಕೆಯನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.