ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದ ಅಡಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸುಳ್ಳು ಬಿಲ್ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ ಎಂಬ ಪ್ರಕರಣದ ಕುರಿತು ನಿವೃತ್ತ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಶೇಷ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸೂಚನೆಯ ಮೇರೆಗೆ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಪ್ರಕರಣದ ಕುರಿತು ಸತ್ಯಾಸತ್ಯತೆ ಅರಿಯಲು ನಿಷ್ಪಕ್ಷಪಾತವಾದ ತನಿಖೆ ನಡೆಸಲು ಸಚಿವೆ ಸೂಚಿಸಿದ್ದರು. ಅದರಂತೆ ಇಲಾಖೆಯ ಉಪನಿರ್ದೇಶಕರ ಡಿಸೆಂಬರ್ 20ರ ಪತ್ರ ಆಧರಿಸಿ ಈ ಆದೇಶ ಹೊರಡಿಸಲಾಗಿದ್ದು, ನಿವೃತ್ತ ನ್ಯಾಯಾಧೀಶರಾದ ಎಚ್.ಜಿ.ನಾಗರತ್ನ ತನಿಖೆ ನಡೆಸಲಿದ್ದಾರೆ.
ಹಿಂದಿನ ಉಪನಿರ್ದೇಶಕ ಆರ್.ನಾಗರಾಜ ಮತ್ತು ಪ್ರಥಮ ದರ್ಜೆ ಸಹಾಯಕ ವಿಕ್ರಮ ಅವರು ಎಂಎಸ್ ಪಿಸಿಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಮೇಲೆ ಪ್ರಭಾವ ಬೀರಿ, ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಳಗಾವಿ ಗ್ರಾಮೀಣ, ನಗರ, ಬೈಲಹೊಂಗಲ, ರಾಮದುರ್ಗ ಮತ್ತು ಸವದತ್ತಿ ತಾಲೂಕುಗಳ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದ ಅಡಿ ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಸುಳ್ಳು ಬಿಲ್ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ 2 ಕೋಟಿ ರೂ.ಗಳಷ್ಟು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ವರದಿ ಭಿತ್ತರವಾಗಿತ್ತು.
ಕಳೆದ 2 ವರ್ಷಗಳಲ್ಲಿ ಕಾರ್ಯನಿರ್ವಹಿಸಿದ ಇಲಾಖೆಯ ಉಪ ನಿರ್ದೇಶಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಸುಳ್ಳು ಬಿಲ್ಲುಗಳನ್ನು ತಯಾರಿಸಿ ಸರ್ಕಾರಕ್ಕೆ ವಂಚಿಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಪ್ರಾಥಮಿಕವಾಗಿ ಸ್ವತಂತ್ರ ತನಿಖೆ ಕೈಗೊಳ್ಳಲು ನಿವೃತ್ತ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾನೂನು ಸಲಹೆಗಾರರಾದ ಹೆಚ್.ಜಿ.ನಾಗರತ್ನ ಇವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ಇದನ್ನೂ ಓದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎ.ಎಂ.ಬಸವರಾಜು ಅಮಾನತು