ಬೆಂಗಳೂರು : ಅನೈತಿಕ ಸಂಬಂಧವನ್ನು ಕಡಿದುಕೊಳ್ಳಲು ಮುಂದಾದ ಪ್ರಿಯಕರನ ನಿರ್ಧಾರಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಲು ಮುಂದಾಗಿದ್ದ ಪ್ರೇಯಸಿಯನ್ನು ಪ್ರಿಯಕರನೇ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಸರಗುಣಂ (35) ಮೃತ ಮಹಿಳೆಯಾಗಿದ್ದು, ಈ ಸಂಬಂಧ ಗಣೇಶ್(22) ಎಂಬಾತನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಮೃತ ಸರಗುಣಂ ಈಗಾಗಲೇ ಮದುವೆಯಾಗಿದ್ದು 17 ವರ್ಷದ ಮಗನಿದ್ದಾನೆ. ಪತಿ ಕೂಲಿ ಕೆಲಸ ಮಾಡಿಕೊಂಡಿದ್ದು, ಈಕೆ ಮನೆಕೆಲಸ ಮಾಡಿಕೊಂಡಿದ್ದಳು. ಕಳೆದ ನಾಲ್ಕು ವರ್ಷದ ಹಿಂದೆ ಬಸವೇಶ್ವರ ನಗರ ಬಳಿಯ ಎಂಜಿ ನಗರದಲ್ಲಿ ವಾಸವಿದ್ದಾಗ ಸರಗುಣಗೆ ಆಟೋ ಚಾಲಕನಾಗಿದ್ದ ಗಣೇಶ್ ಎಂಬಾತನ ಪರಿಚಯವಾಗಿತ್ತು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಜೊತೆಗೆ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸರಗುಣ ತನ್ನ ಗಂಡನಿಗೆ ಗೊತ್ತಾಗದಂತೆ ಗಣೇಶನನ್ನು ಭೇಟಿ ಮಾಡುತ್ತಿದ್ದಳು. ಅಲ್ಲದೆ ಸರಗುಣ ಗಣೇಶನಿಗೆ 50 ಸಾವಿರ ರೂ. ಹಣ ನೀಡಿದ್ದಳು. ಜೊತೆಗೆ ಬಸವೇಶ್ವರ ನಗರದ ಜೆಸಿ ನಗರದಲ್ಲಿ ಒಂದು ಬಾಡಿಗೆ ಮನೆಯನ್ನೂ ಆತನಿಗೆ ವ್ಯವಸ್ಥೆ ಮಾಡಿದ್ದಳು. ಸರಗುಣ ಆಗಾಗ ಇಲ್ಲಿಗೆ ಬಂತು ಗಣೇಶನ ಜೊತೆ ಕಾಲ ಕಳೆಯುತ್ತಿದ್ದಳು. ಇತ್ತೀಚೆಗೆ ಗಣೇಶ್ಗೆ ಮತ್ತೋರ್ವಳ ಪರಿಚಯವಾಗಿದ್ದು, ಆಕೆಯ ಜೊತೆ ಸಂಬಂಧ ಹೊಂದಿದ್ದ. ಹೀಗಾಗಿ ಗಣೇಶ್ ಸರಗುಣಳಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ಏಪ್ರಿಲ್ 25ರ ಸಂಜೆ 4 ಗಂಟೆಗೆ ಸರಗುಣಂ ಮತ್ತೆ ಗಣೇಶನ ಮನೆಗೆ ಬಂದಿದ್ದಳು. ಗಣೇಶನಲ್ಲಿ ಕ್ಯಾತೆ ತೆಗೆದಿದ್ದ ಸರಗುಣಂ, ನಾನೇ ಹಣ ಕೊಟ್ಟು, ಮನೆ ಮಾಡಿಕೊಟ್ಟು ನೋಡಿಕೊಳ್ಳುತ್ತಿದ್ದೇನೆ. ಈಗ ನನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ಹಣ ವಾಪಸ್ ಕೊಡು. ಇಲ್ಲವಾದರೆ ಗಂಡನನ್ನು ಬಿಟ್ಟು ಬರುತ್ತೇನೆ ಮದುವೆಯಾಗು ಎಂದು ಪೀಡಿಸಿದ್ದಳು. ಈಕೆಯ ಮಾತಿನಿಂದ ರೋಸಿಹೋಗಿದ್ದ ಗಣೇಶ್, ತಾನು ಸಾಯುವುದಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದ. ಇದೇ ವೇಳೆ ಸರಗುಣಂ, ನಾನು ಸಾಯ್ತೀನಿ ಎಂದು ಗಣೇಶ್ ಹಾಕಿದ್ದ ನೇಣಿನ ಕುಣಿಕೆಗೆ ಕೊರಳೊಡ್ಡಿದ್ದಾಳೆ. ಈ ವೇಳೆ ಇದೇ ಸರಿಯಾದ ಸಮಯ ಎಂದುಕೊಂಡ ಗಣೇಶ್ ಕುಣಿಕೆ ಹಾಕಿಕೊಳ್ಳಲು ಹತ್ತಿದ್ದ ಕುರ್ಚಿಯನ್ನು ಎಳೆದಿದ್ದಾನೆ. ಈ ವೇಳೆ ಸರಗುಣಂ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ವಿವರಿಸಿದ್ದಾರೆ.
ಸರಗುಣಂ ಮೃತಪಟ್ಟ ಬಳಿಕ ಆಕೆಯನ್ನು ಗಣೇಶ್ ತನ್ನ ಆಟೋದಲ್ಲೇ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಈ ವೇಳೆ ಆಸ್ಪತ್ರೆಯಲ್ಲಿ, ನನ್ನ ಅಕ್ಕ ನೇಣು ಹಾಕಿಕೊಂಡಿದ್ದಾಳೆ ಬದುಕಿಸಿ ಕೊಡಿ ಸರ್ ಎಂದು ಡ್ರಾಮಾ ಮಾಡಿದ್ದ. ಆದರೆ ಅಷ್ಟೊತ್ತಿಗಾಗಲೇ ಸರಗುಣಂ ಮೃತಪಟ್ಟಿದ್ದಳು. ಅಷ್ಟೇ ಅಲ್ಲದೆ ಪೊಲೀಸರ ಮುಂದೆಯೂ ಇದೇ ಸುಳ್ಳು ಹೇಳಿದ್ದ. ಈ ಸಂಬಂಧ ಪೊಲೀಸರು ಕೂಲಂಕಷ ತನಿಖೆ ನಡೆಸಿ ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ಮಗಳ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ.. ಆರೋಪಿಗೆ ಜೀವಾವಧಿ ಶಿಕ್ಷೆ, ಮೂರು ಲಕ್ಷ ದಂಡ