ಬೆಂಗಳೂರು: ಹೊಸ ವರ್ಷದ ಮೊದಲ ಗ್ರಹಣ ನಾಳೆ ರಾತ್ರಿ ನಡೆಯಲಿದೆ. ಭೂಮಿ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ ಆಗಲಿದ್ದು, ನಾಳೆ ಭೂಮಿಯ ಪಾರ್ಶ್ವ ಛಾಯೆ ಬಿದ್ದು ಗ್ರಹಣ ಆಗುತ್ತಿರುವುದರಿಂದ ಗ್ರಹಣ ಗುರುತಿಸುವುದು ಕಷ್ಟ. ಹೀಗಾಗಿ ಎಂದಿನಂತೆ ಹುಣ್ಣಿಮೆ ಚಂದ್ರನೇ ನಾಳೆ ರಾತ್ರಿಯೂ ಗೋಚರಿಸಲಿದ್ದಾನೆ.
ಗ್ರಹಣದ ವೇಳೆ ಚಂದ್ರನನ್ನು ಬರಿಗಣ್ಣಿನಿಂದ ನೋಡಿದರೂ ಸಮಸ್ಯೆ ಇಲ್ಲ. ಇನ್ನು ಈ ಗ್ರಹಣದ ಬಗ್ಗೆ ಸಾಮಾನ್ಯ ಪಂಚಾಂಗಗಳಲ್ಲೂ ಬರೆದಿರೋದಿಲ್ಲ. ಗ್ರಹಣವು ನಾಳೆ ರಾತ್ರಿ 10-37 ರಿಂದ 12:42 ಕ್ಕೆ ಮಧ್ಯಕಾಲ ಹಾಗೂ 2-40 ಕ್ಕೆ ಗ್ರಹಣ ನಿರ್ಗಮನವಾಗಲಿದೆ. ಚಂದ್ರಗ್ರಹಣ ಆದರೂ ಗುರುತಿಸೋದು ಕಷ್ಟ ಅಂತ ಜವಹರಲಾಲ್ ನೆಹರೂ ತಾರಾಲಯದ ನಿರ್ದೇಶಕರಾದ ಡಾ. ಪ್ರಮೋದ್ ಗಲಗಲಿ ಈಟಿವಿಭಾರತ್ ಗೆ ತಿಳಿಸಿದ್ದಾರೆ.
ಕೆಲವೊಂದು ನಾಗರಿಕತೆಯಿಂದ ಬಂದ ಹೆಸರಿನಂತೆ ಈ ಗ್ರಹಣವನ್ನು ತೋಳ ಚಂದ್ರಗ್ರಹಣ ಎಂದೂ ಕರೆಯಲಾಗುತ್ತದೆ. ರಾತ್ರಿ ವೇಳೆ ಗ್ರಹಣ ನಡೆಯೋದ್ರಿಂದ ದೇವಸ್ಥಾನಗಳಲ್ಲಿ ದರ್ಬೆಯಿಂದ ದೇವರ ಮೂರ್ತಿಯನ್ನು ಮುಚ್ಚಿಡೋದಿಲ್ಲ. ಬದಲಾಗಿ ಸೂರ್ಯೋದಯದ ಮೊದಲು ಪೂಜೆ ಮಾಡಲು ನಗರದ ಪ್ರಮುಖ ದೇವಾಲಯಗಳು ಸಿದ್ಧತೆ ಮಾಡಿಕೊಂಡಿವೆ.