ಬೆಂಗಳೂರು/ಬೆಳಗಾವಿ: ನಾಳೆಯಿಂದ ಡಿಸೆಂಬರ್ 30ರವರೆಗೆ ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಪ್ರತಿಪಕ್ಷಗಳನ್ನು ಎದುರಿಸಲು ಆಡಳಿತಾರೂಢ ಪಕ್ಷ ಬಿಜೆಪಿ ಸಿದ್ದತೆ ಮಾಡಿಕೊಂಡಿದೆ.
40 ಪರ್ಸೆಂಟ್ ಕಮೀಷನ್, ಮತದಾರರ ಪಟ್ಟಿ ಹಗರಣ ಆರೋಪ, ಗಡಿ ವಿವಾದ, ಮೀಸಲಾತಿ ಹೋರಾಟಗಳ ಜತೆಗೆ ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆಗಳು, ರೈತರ ಸಮಸ್ಯೆಗಳನ್ನಿಟ್ಟುಕೊಂಡು ಪ್ರತಿಪಕ್ಷಗಳ ನಡೆಸುವ ವಾಗ್ದಾಳಿಗೆ ಆಡಳಿತದ ಬಿಜೆಪಿ ಸರ್ಕಾರ ಉತ್ತರಿಸಲು ಸಿದ್ಧವಾಗಿದೆ.
ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷ ಸನ್ನದ್ಧ: ಬೆಳಗಾವಿಯಲ್ಲಿ ಹದಿನೈದನೆಯ ವಿಧಾನಸಭೆಯ ಹದಿನಾಲ್ಕನೇ ಅಧಿವೇಶನ ಆರಂಭಗೊಳ್ಳಲಿದೆ. ಬೆಳಗ್ಗೆ 11 ಗಂಟೆಗೆ ಸದನದ ಕಲಾಪ ಆರಂಭವಾಗಲಿದೆ. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿವೆ. ಅವುಗಳನ್ನು ಎದುರಿಸಲು ಬಿಜೆಪಿಯೂ ಸನ್ನದ್ಧವಾಗಿದೆ.
ಮತ್ತೆ ಪ್ರತಿಧ್ವನಿಸುವ 40 ಪರ್ಸೆಂಟ್: 40 ಪರ್ಸೆಂಟ್ ಕಮೀಷನ್ ಆರೋಪ ಈ ಬಾರಿಯೂ ಸದನದಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಇದೆ. ಒಂದು ವೇಳೆ ಈ ವಿಷಯದ ಮೇಲೆ ಪ್ರತಿಪಕ್ಷಗಳು ಚರ್ಚೆಗಿಳಿದಲ್ಲಿ ಸರ್ಕಾರ ಯಾವ ರೀತಿ ಪರಿಸ್ಥಿತಿ ಎದುರಿಸಬೇಕು, ಸದಸ್ಯರು ಹೇಗೆ ಸರ್ಕಾರದ ಬೆನ್ನಿಗೆ ನಿಲ್ಲಬೇಕು ಎನ್ನುವ ಕುರಿತು ಈಗಾಗಲೇ ಚರ್ಚಿಸಿ ಪ್ರತಿಪಕ್ಷಗಳ ವಿರುದ್ಧ ಪರ್ಸಂಟೇಜ್ ಆರೋಪಕ್ಕೆ ಹಿಂದಿನ ಹತ್ತಾರು ವರ್ಷಗಳ ಉದಾಹರಣೆಗಳನ್ನು ನೀಡಿ ತಕ್ಕ ತಿರುಗೇಟು ನೀಡಲು ಸಿದ್ಧತೆ ನಡೆಸಿಕೊಂಡಿದೆ.
ಗಡಿ ವಿಚಾರ ವಿಷಯ: ಗಡಿ ವಿಷಯ ಈ ಬಾರಿ ಪ್ರಮುಖ ಚರ್ಚಿತ ವಿಷಯವಾಗಲಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಈ ವಿಷಯದ ಚರ್ಚೆಗೆ ಹೆಚ್ಚಿನ ಮಹತ್ವ ಬದಲಿದೆ. ಈ ವಿಚಾರದಲ್ಲಿ ಸರ್ಕಾರ ತನ್ನ ನಿಲುವನ್ನು ಸದನದಲ್ಲಿ ಅಧಿಕೃತವಾಗಿ ಮತ್ತೊಮ್ಮೆ ಸ್ಪಷ್ಟಪಡಿಸುವ ಮೂಲಕ ರಾಜ್ಯದ ನೆಲ, ಜಲ, ಗಡಿ, ಭಾಷೆ ವಿಚಾರದಲ್ಲಿ ರಾಜಿಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲಿದೆ.
ಅಮಿತ್ ಶಾ ಸಭೆಗೆ ತರಾಟೆ ಸಂಭವ: ಮಹಾರಾಷ್ಟ್ರ ತಗಾದೆ ಕೋರ್ಟ್ ನಲ್ಲಿದ್ದು ಅಲ್ಲಿಯೇ ಇದನ್ನು ಇತ್ಯರ್ಥ ಮಾಡಿಕೊಳ್ಳುವ ಘೋಷಣೆ ಮಾಡಲಿದೆ. ಆದರೆ ಈ ವಿಷಯದಲ್ಲಿ ಇತ್ತೀಚೆಗೆ ಅಮಿತ್ ಶಾ ನಡೆಸಿದ ಸಭೆ ಕುರಿತು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆ ತೆಗೆದುಕೊಳ್ಳಲಿವೆ. ಯಾವ ರಾಜ್ಯವೂ ಬೆಳಗಾವಿ ಹಕ್ಕು ಸಮರ್ಥಿಸಿಕೊಳ್ಳಬಾರದು ಎನ್ನುವ ಸಲಹೆಗೆ ಕಿಡಿಕಾರಲಿವೆ. ಇದನ್ನು ಸರ್ಕಾರ ಎದುರಿಸಲು ಹಿರಿಯ ಸಚಿವರಿಗೆ,ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಕಬ್ಬು ಬೆಳೆಗಾರರ ಬೇಡಿಕೆ: ಕಬ್ಬು ಬೆಳೆಗಾರರ ಬೇಡಿಕೆ ವಿಷಯ ಮೇಲಿನ ಚರ್ಚೆಗೂ ಸರ್ಕಾರ ಸನ್ನದ್ದವಾಗಿದೆ. ಈಗಾಗಲೇ ಕಬ್ಬಿನ ಉಪ ಉತ್ಪನ್ನಗಳ ಲಾಭಾಂಶದಲ್ಲಿ ರೈತರಿಗೆ ಪಾಲು ನೀಡುವ ಘೋಷಣೆ ಮಾಡಿದ್ದು, ಕಬ್ಬಿನ ಕಟಾವು ಮತ್ತು ಸಾಗಣೆ ವೆಚ್ಚದ ಕುರಿತು ಅಧಿವೇಶನದಲ್ಲಿ ಚರ್ಚಿಸಿ ನಿರ್ಧರಿಸುವ ಭರವಸೆ ಮೂಲಕ ಕಬ್ಬು ಬೆಳೆಗಾರರ ಹೋರಾಟದ ವಿಚಾರದಲ್ಲಿ ಪ್ರತಿಪಕ್ಷಗಳನ್ನು ಮಣಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
ಮೀಸಲಾತಿ ಕಗ್ಗಂಟು : ಮೀಸಲಾತಿ ಹೋರಾಟದ ವಿಚಾರಗಳು ಸದನದಲ್ಲಿ ಚರ್ಚೆಯಾಗಲಿವೆ. ಪಂಚಮಸಾಲಿ ಹೋರಾಟದ ಕಿಚ್ಚಿನ ಬಿಸಿ ಸರ್ಕಾರಕ್ಕೆ ತಟ್ಟಲಿದೆ. ಆದರೆ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ, ವಾಲ್ಮೀಕಿ ಸಮುದಾಯದ ಬೇಡಿಕೆ ಪರಿಗಣನೆ ಸೇರಿದಂತೆ ಇತರ ಮೀಸಲಾತಿ ವಿಷಯಗಳ ಪ್ರಸ್ತಾಪ ಹಾಗೂ ಪಂಚಮಸಾಲಿ ಸೇರಿ ವಿವಿಧ ಸಮುದಾಯಗಳಿಗೆ ಸಾಂವಿಧಾನಿಕ ಅವಕಾಶದಂತೆ ಮೀಸಲಾತಿ ಕಲ್ಪಿಸುವ ಅಭಯ ನೀಡುವ ಮೂಲಕ ಸದನದಲ್ಲಿ ತಾತ್ಕಾಲಿಕ ಮೀಸಲಾತಿ ಕುಣಿಕೆಯಿಂದ ಪಾರಾಗಲು ಸರ್ಕಾರ ಯತ್ನಿಸಲಿದೆ.
ಕುಕ್ಕರ್ ಬ್ಲಾಸ್ಟ್ ಪ್ರಕರಣ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ವಿಚಾರವನ್ನು ಸಹ ಪ್ರಸ್ತಾಪಿಸಲು ಪ್ರತಿಪಕ್ಷಗಳು ಮುಂದಾಗಿವೆ. ಇದಕ್ಕೆ ಕುಕ್ಕರ್ ಬ್ಲಾಸ್ಟ್ ವಿಷಯವೂ ಸೇರಿಕೊಳ್ಳಲಿದೆ. ಭಯೋತ್ಪಾದಕ ಕೃತ್ಯಗಳನ್ನು ನಿರ್ವಹಿಸುತ್ತಿರುವ ವಿಷಯ ಪ್ರಸ್ತಾಪಿಸಿ ರಾಜಕೀಯವಾಗಿ ಪ್ರತಿಪಕ್ಷಗಳಿಗೆ ಟಕ್ಕರ್ ನೀಡಲು ಬಿಜೆಪಿ ಸರ್ಕಾರ ಸಿದ್ಧತೆ ನಡೆಸಿದೆ.
ನೀರಾವರಿ ಯೋಜನೆ ವಿಳಂಬ: ಪ್ರತಿ ಬಾರಿಯಂತೆ ಈ ಬಾರಿಯೂ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ನಿರ್ಲಕ್ಷ್ಯದ ಬಗ್ಗೆಯೂ ಚರ್ಚೆಯಾಗಲಿದೆ. ನೀರಾವರಿ ಯೋಜನೆಗಳ ಜಾರಿ ವಿಚಾರದಲ್ಲಿ ಸರ್ಕಾರದ ವಿಳಂಬ ಧೋರಣೆ ಬಗ್ಗೆ ಪ್ರತಿಪಕ್ಷಗಳಿಂದ ಟೀಕೆ ಎದುರಿಸಬೇಕಿದೆ. ಕಳಸಾ ಬಂಡೂರಿ ನೀರಾವರಿ ಯೋಜನೆ ಪ್ರಸ್ತಾಪಿಸಿ ಎತ್ತಿನಹೊಳೆ, ಮೇಕೆದಾಟು ವಿಷಯದಲ್ಲಿಯೂ ಸರ್ಕಾರ ಸ್ಪಷ್ಟೀಕರಣ ನೀಡಲು ಸಿದ್ಧತೆ ಮಾಡಿಕೊಂಡಿದೆ.
ಈ ಎಲ್ಲದರ ನಡುವೆ ಪಿಎಸ್‌ಐ ನೇಮಕಾತಿ ಪ್ರಕರಣವು ಬೆಳಗಾವಿ ಅಧಿವೇಶನದಲ್ಲಿ ಸದ್ದು ಮಾಡಲಿದ್ದು, ಈ ವಿಷಯದಲ್ಲಿ ಈವರೆಗಿನ ತನಿಖಾ ಹಂತದ ವಿವರಗಳನ್ನು ಸದನಕ್ಕೆ ತಿಳಿಸಿ ಪ್ರತಿಪಕ್ಷಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಸಿದ್ಧವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂಓದಿ:ನಾಳೆಯಿಂದ ವಿಧಾನಮಂಡಲ ಅಧಿವೇಶನ.. ಸಮರ್ಪಕ ವ್ಯವಸ್ಥೆ ಕಲ್ಪಿಸಲು ಸಭಾಪತಿ ಮಲ್ಕಾಪುರೆ ಸೂಚನೆ