ಬೆಂಗಳೂರು: ಪೌರ ಕಾರ್ಮಿಕರ ಎಲ್ಲ ಇಲಾಖೆಗಳಿಂದ ಮಾಹಿತಿ ಪಡೆದು ಆರ್ಥಿಕ ಹೊರೆಯ ಬಗ್ಗೆ ಪರಿಶೀಲನೆ ನಡೆಸಿ, ಅವರನ್ನು ಖಾಯಂ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಇಂದು ತಿಳಿಸಿದರು.
ಶೂನ್ಯ ವೇಳೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಪಿ.ರಾಜೀವ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಪೌರ ಕಾರ್ಮಿಕರನ್ನು ಗುತ್ತಿಗೆದಾರರು ನೇಮಕ ಮಾಡಿಕೊಳ್ಳುತ್ತಾರೆ. ಅವರಿಗೆ ಸರಿಯಾಗಿ ವೇತನ ಕೊಡುತ್ತಿರಲಿಲ್ಲ. ಈಗ ಪೌರ ಕಾರ್ಮಿಕರ ಖಾತೆಗಳಿಗೆ ವೇತನ ಜಮೆಯಾಗುತ್ತಿದೆ. ಪೌರಕಾರ್ಮಿಕರ ಆರೋಗ್ಯಕ್ಕಾಗಿ ಪ್ರತಿ ತಿಂಗಳು 2 ಸಾವಿರ ರೂ. ಒದಗಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ. ವೈದ್ಯಕೀಯ ಸೌಲಭ್ಯ ಒದಗಿಸುವುದು ಸೇರಿದಂತೆ ಅವರಿಗೆ ಅಗತ್ಯ ಅನುಕೂಲಗಳನ್ನು ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ಕಾರ್ಮಿಕರ ಸ್ಥಿತಿ ಗೊತ್ತಿದೆ. ಸ್ವಚ್ಛತೆ ಮಾಡುವಾಗ ಪ್ರಾಣ ಕಳೆದುಕೊಂಡ ಘಟನೆಗಳು ನಡೆದಿವೆ. ಮತ್ತೆ ಮರುಕಳಿಸಿವೆ. ಎಲ್ಲ ಇಲಾಖೆಗಳಿಂದ ಮಾಹಿತಿ ಪಡೆದು ಅವರನ್ನು ಖಾಯಂ ಮಾಡುವ ನಿರ್ಧಾರ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸೇವೆ ಖಾಯಂ ಮಾಡುವುದು ಸೇರಿದಂತೆ 27 ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಪೌರಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ, ನಗರಗಳಲ್ಲಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಮೃತಪಟ್ಟವರಿಗೆ 10 ಲಕ್ಷ ಪರಿಹಾರ ಕೊಡುತ್ತಿಲ್ಲ. ನಮ್ಮ ಅವಧಿಯಲ್ಲಿ 7,700 ರಿಂದ 17 ಸಾವಿರಕ್ಕೆ ವೇತನ ಹೆಚ್ಚಿಸಲಾಗಿತ್ತು. 18 ಸಾವಿರ ಪೌರಕಾರ್ಮಿಕರನ್ನು ಕಾಯಂ ಮಾಡಿ ಅವರ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಸಮವಸ್ತ್ರ ವಿವಾದ ಬಗ್ಗೆ ಹೆಚ್ಡಿಕೆ ಪ್ರಸ್ತಾಪ : ಕಾಂಗ್ರೆಸ್ ಶಾಸಕ ಜಮೀರ್- ಜೆಡಿಎಸ್ ಶಾಸಕರ ನಡುವೆ ವಾಗ್ವಾದ
ಶಾಸಕ ಪಿ.ರಾಜೀವ್ ಮಾತನಾಡಿ, ಪೌರ ಕಾರ್ಮಿಕರಿಗೆ 2 ಸಾವಿರ ರೂ. ಸಾಲುವುದಿಲ್ಲ. ನಗರ, ಪಟ್ಟಣದ ಸ್ವಚ್ಛತೆಗೆ ಪೌರಕಾರ್ಮಿಕರ ಸೇವೆ ಮುಖ್ಯ. ಪ್ರಧಾನಿಯವರು ಪೌರಕಾರ್ಮಿಕರ ಪಾದ ತಳೆದು ಸನ್ಮಾನಿಸಿದರು. ಅವರ ಜೀವಿತಾವಧಿ 45ರಿಂದ 50 ವರ್ಷ ಮಾತ್ರವಿದೆ. ನಗರಾಭಿವೃದ್ಧಿ, ಪೌರಾಡಳಿತ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುತ್ತಾರೆ. ಶೇ.1ರಷ್ಟು ಸಂಗ್ರಹಿಸಲಾಗುವ ಸೆಸ್ನ್ನು ಪೌರಕಾರ್ಮಿಕರ ವೇತನ ಕಲ್ಯಾಣಕ್ಕೆ ಮೀಸಲಿಟ್ಟರೆ 35 ರಿಂದ 45 ಸಾವಿರ ರೂ. ವೇತನ ಕೊಡಬಹುದು ಎಂದು ಸಲಹೆ ನೀಡಿದರು.