ಬೆಂಗಳೂರು: ಪತ್ನಿಯ ಕುತ್ತಿಗೆ ವೇಲ್ ನಿಂದ ಬಿಗಿದು ಕೊಲೆ ಮಾಡಿ, ಹೃದಯಾಘಾತವಾಗಿದೆ ಎಂದು ಬಿಂಬಿಸಿದ್ದ ಕಾರು ಚಾಲಕನನ್ನು ನಗರದ ಪಶ್ಚಿಮ ವಿಭಾಗದ ಬ್ಯಾಡರಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾಡರಹಳ್ಳಿಯ ಮುನೇಶ್ವರನಗರ 7ನೇ ಕ್ರಾಸ್ ನಿವಾಸಿ ಸೌಮ್ಯಾ (25) ಕೊಲೆಯಾದ ನತದೃಷ್ಟೆ. ಈಕೆಯ ಪತಿ ಯೋಗೇಶ್ (25) ಆರೋಪಿಯಾಗಿದ್ದಾನೆ.
![ಆರೋಪಿ ಯೋಗೇಶ್](https://etvbharatimages.akamaized.net/etvbharat/prod-images/kn-bng-06-husband-murder-wife-using-dupatta-7210969_26032022155450_2603f_1648290290_207.jpg)
ತವರಿನಿಂದ ಹಣ, ಒಡವೆ ತರುವ೦ತೆ ಸೌಮ್ಯಾಳಿಗೆ ಪತಿ ಪೀಡಿಸುತ್ತಿದ್ದುದ್ದರಿಂದ ತವರು ಮನೆಯವರು ಎರಡು ಬಾರಿ ಹಣ ಕೊಟ್ಟಿದ್ದಾರೆ. ಆದರೂ ಸಹ ಪದೇ ಪದೆ ಹಣಕ್ಕಾಗಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಮೂಲತಃ ನಾಗಮಂಗಲ ಸಮೀಪದ ಬೆಳ್ಳೂರು ಕ್ರಾಸ್ ನಿವಾಸಿ ಯೋಗೇಶ್ ಕಾರು ಚಾಲಕನಾಗಿದ್ದ.
ಮೂರು ವರ್ಷದ ಹಿಂದೆ ಮಂಚೇನಹಳ್ಳಿಯ ನಿವಾಸಿ ಸೌಮ್ಯಾ ರನ್ನು ಪ್ರೀತಿಸಿ ವಿವಾಹವಾಗಿದ್ದ. ದಂಪತಿಗಳು ಮುನೇಶ್ವರ ನಗರದಲ್ಲಿ ವಾಸವಾಗಿದ್ದರು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.
ವೇಲ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ : ಈ ನಡುವೆ ಕೆಲವು ದಿನಗಳಿಂದ ಪತಿ ಪತ್ನಿಯ ನಡುವೆ ನಡುವೆ ಜಗಳವಾಗುತ್ತಿತ್ತು. ತವರಿನಿಂದ 2 ಲಕ್ಷ ಹಣ ತರುವಂತೆ ಕಳೆದ ಮೂರು ದಿನಗಳಿಂದ ಸೌಮ್ಯಾ ಜೊತೆಯಲ್ಲಿ ಯೋಗೇಶ್ ಜಗಳವಾಡುತ್ತಿದ್ದನು. ನಿನ್ನ(ಶುಕ್ರವಾರ) ಸಂಜೆ ಸುಮಾರು 5.30 ರ ಸಮಯದಲ್ಲಿ ಮತ್ತೆ ಇದೇ ವಿಚಾರವಾಗಿ ಪತ್ನಿ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಕೈಗೆ ಸಿಕ್ಕಿದ ವೇಲ್ ನಿಂದ ಸೌಮ್ಯಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಹೃದಯಘಾತ ಎಂದು ನಾಟಕ: ಸೌಮ್ಯಾ ಪೋಷಕರಿಗೆ ಯೋಗೇಶ್ ದೂರವಾಣಿ ಕರೆ ಮಾಡಿ ನಿಮ್ಮ ಮಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆಂದು ತಿಳಿಸಿದ್ದ. ಸೌಮ್ಯಾ ಪೋಷಕರು ಹಾಗೂ ಸಂಬಂಧಿಕರು ಮಗಳ ಮನೆಗೆ ಬಂದಾಗ ಮೃತ ದೇಹ ನೋಡಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು ಎಂದು ಡಿಸಿಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ
ಹೆಚ್ಚಿನ ವಿಚಾರಣೆ ನಡೆಸಿರುವ ಪೊಲೀಸರು: ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬ್ಯಾಡರಹಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಆ ವೇಳೆ ಸೌಮ್ಯಾ ತಾಯಿ ಮಗಳ ಸಾವಿನ ಬಗ್ಗೆ ಅನುಮಾನವಿದೆ ಎಂದು ತಿಳಿಸಿದ್ದರು. ಆಗ ಯೋಗೇಶ್ನನ್ನು ವಿಚಾರಣೆ ಮಾಡಿದಾಗ ಸೌಮ್ಯಾಳನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.
ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಸೌಮ್ಯಾ ತಾಯಿ ಜಯಮ್ಮ ನೀಡಿರುವ ದೂರನ್ನು ದಾಖಲಿಸಿಕೊಂಡು ಆರೋಪಿ ಯೋಗೇಶ್ ನನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.