ಬೆಂಗಳೂರು: ಪ್ರಿಯಕರನ ಜತೆ ಸೇರಿ ಗಂಡನ ಹತ್ಯೆಗೈದ ಪತ್ನಿ ಶ್ವೇತಾಳನ್ನು ಬಂಧಿಸಿದ ಯಲಹಂಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಯಲಹಂಕದ ಕೊಂಡಪ್ಪ ಲೇಔಟ್‌ನಲ್ಲಿ ವಾಸವಾಗಿದ್ದ ಹಿಂದೂಪುರ ಮೂಲದ ಚಂದ್ರಶೇಖರ್ ಎಂಬಾತನನ್ನು ಹತ್ಯೆ ಮಾಡಿದ ಆರೋಪದಡಿ ಶ್ವೇತಾ ಹಾಗೂ ಪ್ರಿಯಕರ ಸುರೇಶ್‌ನನ್ನು ಕಳೆದ ಎರಡು ದಿನಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಹಿಂದೂಪುರ ಕಾಲೇಜಿನಲ್ಲಿ ಓದುವಾಗಲೇ ಶ್ವೇತಾ ತನ್ನೂರಿನಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಿಗೆ ವಾಲೆಂಟಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಆಗ ಸುರೇಶ್ ಪರಿಚಯವಾಗಿದ್ದ. ಬಳಿಕ ಸ್ನೇಹವಾಗಿ ಕಾಲಕ್ರಮೇಣ ಪ್ರೀತಿಯಾಗಿ ಬದಲಾಗಿತ್ತು.
ಮನೆಯಲ್ಲಿ ಸೋದರ ಮಾವ ಚಂದ್ರಶೇಖರ್ ಜೊತೆ ಮನೆಯವರು ಮದುವೆ ನಿಶ್ಚಯಿಸಿದರೂ ಪ್ರೀತಿಯ ಬಗ್ಗೆ ಶ್ವೇತಾ ಹೇಳಿರಲಿಲ್ಲ. ಮದುವೆ ನಂತರವೂ ಇವರ ಪ್ರೇಮ ಕಹಾನಿ ಮುಂದುವರೆದಿತ್ತು. ಅಷ್ಟೇ ಅಲ್ಲ, ಸುರೇಶ್ ಸೇರಿದಂತೆ ಇನ್ನೂ ಹಲವರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದಳು ಎಂಬ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ.
ಹಲವು ಯುವಕರೊಂದಿಗೆ ಆತ್ಮೀಯತೆ: ಮನೆಯಲ್ಲಿ ಪತಿಗೆ ಒಮ್ಮೆ ಅನುಮಾನ ಬಂದು ಶ್ವೇತಾಳನ್ನು ತರಾಟೆಗೆ ತೆಗೆದುಕೊಂಡಾಗ ತನಗೆ ಸಂಬಂಧಿಯಾಗಿರುವ ಲೋಕೇಶ್ ಪ್ರೀತಿಸುವಂತೆ ಕಾಟ ಕೊಡುತ್ತಿದ್ದಾನೆ. ನನ್ನ ಖಾಸಗಿ ವಿಡಿಯೋ ಹಾಗೂ ಫೋಟೋಗಳು ಅವನ ಬಳಿಯಿವೆ ಎಂದು ಹೇಳಿದ್ದಳು. ಅದಕ್ಕೆ ಚಂದ್ರಶೇಖರ್ ಹಿಂದೂಪುರದಲ್ಲಿ ಪೊಲೀಸರಿಗೆ ದೂರು ಕೊಡಿಸಿ, ಲೋಕೇಶ್ಗೆ ಪತ್ನಿಯಿಂದ ಚಪ್ಪಲಿಯಲ್ಲಿ ಹೊಡೆಸಿದ್ದ. ಇದಾದ ನಂತರ ಪತ್ನಿ ಜೊತೆ ಚಂದ್ರಶೇಖರ್ ಯಲಹಂಕಗೆ ಶಿಫ್ಟ್ ಆಗಿದ್ದ. ಶ್ವೇತಾ ಬೆಂಗಳೂರಿನಲ್ಲಿ ಎಂಎಸ್ಸಿ ಓದುತ್ತಿದ್ದರೂ ಹಲವು ಯುವಕರೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಅವರೊಂದಿಗೆ ಓಡಾಟ ನಡೆಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗಂಡನ ಹತ್ಯೆಗೆ ಸಂಚು: ಬೆಂಗಳೂರಿಗೆ ಬಂದು 4 ತಿಂಗಳು ಕಳೆಯುವ ಮುನ್ನವೇ ಪ್ರೇಮಿ ಸುರೇಶ್ ಜೊತೆ ಸೇರಿ ಪತಿಯ ಕೊಲೆಗೆ ಸಂಚು ಹಾಕಿದ್ದಳು. ಅದಕ್ಕಾಗಿಯೇ ಒಮ್ಮೆ ಊರಿಗೆ ಹೋದಾಗ ಒಂದು ಹೊಸ ಸಿಮ್ ಖರೀದಿಸಿ, ಸುರೇಶ್ಗೆ ಕೊಟ್ಟಿದ್ದಳು. ಕೊಲೆಯ ದಿನ ಅಂದರೆ ಅ.21ರಂದು ಸುರೇಶ್‌ನನ್ನು ಯಲಹಂಕದ ತಮ್ಮ ಮನೆಗೆ ಕರೆಯಿಸಿಕೊಂಡು ಗಂಡನ ಹತ್ಯೆಗೆ ಸಂಚು ರೂಪಿಸಿದ್ದಳು.
ಪೂರ್ವನಿಯೋಜನೆಯಂತೆ ಶ್ವೇತಾಳ ಮನೆಯ ಟೆರೇಸ್ ಮೇಲೆ ಸುರೇಶ್ ಅವಿತುಕೊಂಡಿದ್ದ. ಎಂದಿನಂತೆ ಸಂಜೆ ಮನೆಗೆ ಬಂದ ಚಂದ್ರಶೇಖರ್‌ಗೆ ಶ್ವೇತಾ ಮನೆಯಲ್ಲಿ ನೀರು ಬರ್ತಿಲ್ಲ ಅಂತ ಕಾರಣ ಹೇಳಿ ಪತಿಯನ್ನು ಟೆರೇಸ್ಗೆ ಕಳಿಸಿದ್ದಳು. ಏನೂ ತಿಳಿಯದ ಚಂದ್ರಶೇಖರ್ ಮನೆಯ ಟೆರೇಸ್ ಮೇಲೆ ಹೋಗುತ್ತಿದ್ದಂತೆಯೇ ಕತ್ತಲಿನಲ್ಲಿದ್ದ ಸುರೇಶ್ ಏಕಾಏಕಿ ರಾಡ್ನಿಂದ ಹಲ್ಲೆ ಮಾಡಿದ್ದಾನೆ.
ಚಾಕುವಿನಿಂದ ಮನಬಂದಂತೆ ಹಲ್ಲೆ: ಹರಿತವಾದ ಚಾಕುವಿನಿಂದ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದ. ನಂತರ ಗಂಡನನ್ನು ಹುಡುಕುತ್ತಾ ಬರುವ ನಾಟಕವಾಡಿ ಅಕ್ಕಪಕ್ಕದವರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದಿದ್ದಳು. ಪ್ಲಾನ್ ಪ್ರಕಾರ, ಲೋಕೇಶ್ನನ್ನು ವಿಲನ್ ಆಗಿ ಪ್ರತಿಬಿಂಬಿಸಿ ನಾಟಕವಾಡಿ ಸಿಕ್ಕಿಬೀಳೋದಿಲ್ಲ ಎಂದು ಸುರೇಶ್ ಮರುದಿನ ಎಂದಿನಂತೆ ಕೆಲಸಕ್ಕೂ ಹೋಗಿದ್ದ. ಆದರೆ ಪೊಲೀಸರು ಶ್ವೇತಾ ಮೇಲಿನ ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ಸದ್ಯ ಇಬ್ಬರೂ ಆರೋಪಿಗಳು ಜೈಲು ಹಕ್ಕಿಗಳಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪ್ರಯಾಣಿಕರ ಬ್ಯಾಗ್ನಿಂದ 1.65 ಲಕ್ಷ ದೋಚಿದ್ದ ಆಟೋ ಚಾಲಕನ ಬಂಧನ