ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವ ಮುನ್ನ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ, ಸಂತ್ರಸ್ತೆ ಕುಟುಂಬದ ಸ್ನೇಹಿತನನ್ನು ಹೋಟೆಲ್ವೊಂದರಲ್ಲಿ ಭೇಟಿಯಾಗಿದ್ದರು ಎಂಬುದನ್ನು ಕಬ್ಬನ್ ಪಾರ್ಕ್ ಪೊಲೀಸರು ಕಂಡುಕೊಂಡಿದ್ದಾರೆ.
ಮಾರ್ಚ್ 1 ರಂದು ದಿನೇಶ್ ಕಲ್ಲಹಳ್ಳಿ ಕೆಂಪು ಬಣ್ಣದ ಕಾರಿನಲ್ಲಿ ಹೊಟೇಲ್ ಮುಂದೆ ಆಗಮಿಸಿದ್ದರು ಎಂಬ ಗುಮಾನಿ ಮೇರೆಗೆ ಕಬ್ಬನ್ ಪಾರ್ಕ್ ಹಾಗೂ ಸಿಸಿಬಿ ಪೊಲೀಸರು ಸ್ಥಳಕ್ಕೆ ತೆರಳಿ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ದೃಶ್ಯಾವಳಿಯಲ್ಲಿ ಸ್ಪಷ್ಟ ಚಹರೆ ಕಾಣಿಸಿದ ಹಿನ್ನೆಲೆ ಅಕ್ಕಪಕ್ಕದ ಏರಿಯಾದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳ ಡಿವಿಆರ್ ವಶಕ್ಕೆ ಪಡೆದುಕೊಂಡು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: ರಮೇಶಣ್ಣ ತಪ್ಪು ಮಾಡಿಲ್ಲ, ಇದು ವ್ಯವಸ್ಥಿತ ಪಿತೂರಿ: ಶಾಸಕ ರಾಜುಗೌಡ
ವ್ಯಕ್ತಿಯೋರ್ವರನ್ನು ಭೇಟಿ ಮಾಡಿರುವ ದಿನೇಶ್ ಕಲ್ಲಹಳ್ಳಿ, ಇಬ್ಬರ ಜೊತೆ ಮಾತನಾಡಿದ ಬಳಿಕ ಅಪರಿಚಿತ ವ್ಯಕ್ತಿಯಿಂದ ಸಿಡಿ ಪಡೆದಿದ್ದಾರೆ ಎಂಬ ಅನುಮಾನದ ಹಿನ್ನೆಲೆ ಪೊಲೀಸರು ಹೆಚ್ಚಿನ ಮಾಹಿತಿ ಹಾಕಲು ಮುಂದಾಗಿದ್ದಾರೆ.
ದಿನೇಶ್ ವಿರುದ್ಧ ಮತ್ತೊಂದು ದೂರು:
ರಮೇಶ್ ಜಾರಕಿಹೊಳಿ ಅವರನ್ನು ಬೆದರಿಸುವ ಉದ್ದೇಶದಿಂದ ವಿಡಿಯೋ ಎಡಿಟ್ ಮಾಡಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ದಿನೇಶ್ ಕಲ್ಲಹಳ್ಳಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಕುಮಾರ್ ಎಂಬುವರು ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ.
ಸರ್ಕಾರ ಮತ್ತು ವ್ಯಕ್ತಿಗಳನ್ನು ಬೆದರಿಸುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ವಿಡಿಯೋ ಎಡಿಟ್ ಮಾಡಿಸಿರುವ ಅಥವಾ ಹನಿಟ್ರ್ಯಾಪ್ ಮಾಡಿರುವ ಶಂಕೆಯಿದೆ. ಇನ್ನು ಸರ್ಕಾರದ ಮೂವರು ಹಾಲಿ ರಾಜಕಾರಣಿಗಳ ಸಿಡಿಯಿದೆ ಎಂದು ಮಾಧ್ಯಮಗಳಲ್ಲಿ ದಿನೇಶ್ ಹೇಳಿಕೆ ನೀಡಿದ್ದಾರೆ. ಇದು ರಾಜಕಾರಣಿ ಹಾಗೂ ಪ್ರಭಾವಿ ವ್ಯಕ್ತಿಗಳ ಬ್ಲ್ಯಾಕ್ ಮೇಲ್ ತಂತ್ರಗಾರಿಕೆಯಾಗಿದೆ. ರಾಜ್ಯ ಸರ್ಕಾರವನ್ನು ಬೆದರಿಸುವ ಉದ್ದೇಶವಿದೆ. ಹೀಗಾಗಿ ದಿನೇಶ್ ಕಲ್ಲಹಳ್ಳಿ ವಿರುದ್ಧ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಪ್ರಶಾಂತ್ ದೂರು ನೀಡಿದ್ದಾರೆ.