ಬೆಂಗಳೂರು: ''ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿಪಕ್ಷಗಳು ಜನರನ್ನು ಎತ್ತಿ ಕಟ್ಟುತ್ತಿವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು, ಚುನಾವಣಾ ಪೂರ್ವದಲ್ಲಿ ಯಾವುದೇ ಷರತ್ತಿಲ್ಲದೆ ಗ್ಯಾರಂಟಿ ಘೋಷಿಸಿದ್ದವರು ಯಾರು'' ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ಗ್ಯಾರಂಟಿಗಳ ಬಗ್ಗೆ ಚರ್ಚೆ ಮಾಡಿ ವೇದಿಕೆ ಸಿದ್ಧ ಮಾಡಿದ್ದವರೇ ನೀವು, ಚುನಾವಣಾ ಪೂರ್ವದಲ್ಲಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಎಂದು ಹೇಳಿದ್ದ ನೀವು (ಕಾಂಗ್ರೆಸ್) ಈಗ ಷರತ್ತು ವಿಧಿಸಿದ್ದಿರಿ. ವಿನಾಕಾರಣ ಜನರನ್ನು ಪ್ರತಿಪಕ್ಷಗಳು ದಾರಿ ತಪ್ಪಿಸುತ್ತಿವೆ ಎಂಬ ಆರೋಪ ಮಾಡಲಾಗುತ್ತಿದೆ'' ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
''ಕಳೆದ ಬಾರಿ ಇಂಧನ ಸಚಿವರು ಯಾರಿದ್ರು, ಸಿಎಂ ಯಾರಿದ್ರು, ಇವರೇ ತಾನೇ ಇದ್ದಿದ್ದು, ಆಗ ಏಕೆ ಈ ಬಗ್ಗೆ ಯೋಚನೆ ಮಾಡಿಲ್ಲ. ಸಿದ್ದರಾಮಯ್ಯನವರೇ ಎಲ್ಲರಿಗೂ 200 ಯುನಿಟ್ ಉಚಿತ ಎಂದು ಹೇಳಿದ್ದು ನೀವೆ ಅಲ್ಲವೇ? ಒಂದು ಮನೆಯಲ್ಲಿ ಮೂರು ಮಹಡಿ ಕಟ್ಟಿರುತ್ತಾರೆ. ಮೀಟರ್ ಒಬ್ಬರ ಹೆಸರಿನಲ್ಲಿ ಇರುತ್ತದೆ. ಆಗ ಬಾಡಿಗೆದಾರರು ಏನು ಮಾಡಬೇಕು. ನಾವು ಪ್ರತಿಪಕ್ಷದಲ್ಲಿ ಇರುವುದೇ ಯುದ್ಧ ಮಾಡಲು, ಇದನ್ನೇ ಮಾಡೋದು. ಬಾಡಿಗೆದಾರರಿಗೆ, ಹೊಸಮನೆ ಕಟ್ಟಿದವರಿಗೆ ಉಚಿತ ವಿದ್ಯುತ್ ಇಲ್ಲವೆ ಎಂದು ಪ್ರಶ್ನಿಸಿದ ಅವರು, ಉಪಮುಖ್ಯಮಂತ್ರಿ ಸ್ನೇಹಕ್ಕೂ ಸಿದ್ಧ, ಯುದ್ಧಕ್ಕೂ ಸಿದ್ಧ ಎಂದು ಹೇಳಿದ್ದಾರೆ. ಜನ ನಮ್ಮನ್ನು ಪ್ರತಿಪಕ್ಷದ ಸ್ಥಾನದಲ್ಲಿ ಕೂರಿಸಿರುವುದು ಸ್ನೇಹ ಮಾಡಲು ಅಲ್ಲ, ಯುದ್ಧ ಮಾಡಲು. ಜನಪರವಾದ ಹೋರಾಟವನ್ನು ಮಾಡುತ್ತೇವೆ. ಚುನಾವಣಾ ಪೂರ್ವದಲ್ಲಿ ನೀಡಿದ ಗ್ಯಾರಂಟಿಗಳು ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಡೂಪ್ಲಿಕೇಟ್ ಆಗಿವೆ ಎಂದು ಹೆಚ್ಡಿಕೆ ಕಿಡಿಕಾರಿದರು.
''ತುಳಿತಕ್ಕೆ ಒಳಗಾದ ವರ್ಗಗಳಿಗೆ ಸುಲಭವಾಗಿ ಈ ಯೋಜನೆಗಳು ಸಿಗುವುದಿಲ್ಲ. ಬಡವರಿಗೆ ಬದುಕು ಕಟ್ಟಿಕೊಳ್ಳಲು ನಮ್ಮ ಸಹಮತವಿದೆ. ಆದರೆ, ಜನರ ತೆರಿಗೆ ಹಣದಿಂದ ಇಂತಹ ಕಾರ್ಯಕ್ರಮ ನೀಡಲಾಗುತ್ತದೆ. ಬಿಜೆಪಿ ನಿನ್ನೆ ಯಾವ ಪುರುಷಾರ್ಥಕ್ಕೆ ಧರಣಿ ಮಾಡಿದೆ. ಅಧಿಕಾರದಲ್ಲಿದ್ದಾಗ ವಿದ್ಯುತ್ ದರ ಏರಿಕೆಗೆ ಬಿಜೆಪಿ ಅರ್ಜಿ ಹಾಕಿರಲಿಲ್ಲವೇ, ಆಗ ನಿಮಗೆ ಪರಿಜ್ಞಾನವಿರಲಿಲ್ಲವೆ? ಎರಡೂ ರಾಷ್ಟ್ರೀಯ ಪಕ್ಷಗಳ ನಡವಳಿಕೆ ಬಗ್ಗೆ ಜನರು ಎಚ್ಚರಿಕೆ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು. ಮೇಕದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಐದು ವರ್ಷದಲ್ಲಿ ಪೂರ್ಣಗೊಳಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡರೆ ನಾವು ಸಹಕಾರ ಕೊಡುತ್ತೇವೆ. ಇಲ್ಲದಿದ್ದರೆ ಜನರನ್ನು ಜಾಗೃತಿಗೊಳಿಸಲು ಹೋರಾಟ ರೂಪಿಸುತ್ತೇವೆ'' ಎಂದು ಎಚ್ಚರಿಕೆ ನೀಡಿದರು.
ಮುಂಬರುವ ಚುನಾವಣೆಗಳಿಗೆ ಸಿದ್ಧತೆ: ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಹಾಗೂ ಲೋಕಸಭಾ ಚುನಾವಣೆ ಸಿದ್ಧತೆ ಬಗ್ಗೆ 31 ಜಿಲ್ಲೆಗಳ ಚುನಾವಣೆಯಲ್ಲಿ ಸೋತ, ಗೆದ್ದ ಅಭ್ಯರ್ಥಿಗಳ ಜೊತೆ ಚರ್ಚಿಸಿ ಮುಂದಿನ ಚುನಾವಣೆಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗುವುದು. ಇಂದಿನಿಂದ ನಾಲ್ಕು ದಿನಗಳ ಕಾಲ ಸರಣಿ ಸಭೆಗಳನ್ನು ನಡೆಸಿ ಚರ್ಚೆ ನಡೆಸಲಾಗುವುದು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಸ್ಥಳೀಯ ಸಂಸ್ಥೆ, ಬಿಬಿಎಂಪಿ, ಲೋಕಸಭೆ ಚುನಾವಣೆಯ ಅಜೆಂಡಾ ಇಟ್ಟುಕೊಂಡು ಸಭೆ ಮಾಡುತ್ತೇವೆ. ಜನತಾ ಜಲಧಾರೆಯ ಮೂಲಕ ಜನತೆಯ ಜಾಗೃತಿ ಮೂಡಿಸಲು ಹೋರಾಟ ಮಾಡಿದ್ದೇವೆ. ಮೇಕೆದಾಟು ಯೋಜನೆ ಬಗ್ಗೆ ನಮ್ಮ ನೀರಾವರಿ ಸಚಿವರು ವಿರಾವೇಷದ ಮಾತನ್ನಾಡಿದ್ದಾರೆ. ಅಲ್ಲಿನ ಅಣ್ಣ ತಮ್ಮಂದಿರ ಬೆಂಬಲ ಕೊರಿದ್ದಾರೆ ಎಂದ ಹೆಚ್ಡಿಕೆ, ಕಾಂಗ್ರೆಸ್ನ ಗ್ಯಾರಂಟಿಗಳ ಬಗ್ಗೆ ಅಧಿವೇಶನದಲ್ಲಿ ಮಾತನಾಡುತ್ತೇನೆ. ನನಗೇನು ಆತುರ ಇಲ್ಲ. ಎಲ್ಲವನ್ನೂ ಮುಂದೆ ಚರ್ಚೆ ಮಾಡುತ್ತೇನೆ ಎಂದರು.
ಜೆಡಿಎಸ್ ಆತ್ಮಾವಲೋಕನ ಸಭೆ: ಇದೇ ವೇಳೆ ರಾಜ್ಯದ ವಿಧಾನಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಹಲವು ಜಿಲ್ಲೆಗಳ ಮುಖಂಡರ ಆತ್ಮಾವಲೋಕನ ಸಭೆಯನ್ನು ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆಸಲಾಯಿತು.
ಈ ಸೋಲು ಶಾಶ್ವತ ಅಲ್ಲ, ತಾತ್ಕಾಲಿಕ. ಧೃತಿಗೆಡದೆ ಪಕ್ಷವನ್ನು ಮರಳಿ ಕಟ್ಟೋಣ. ನಿಮ್ಮ ಜತೆ ನಾವಿದ್ದೇವೆ, ನಿಮ್ಮ ಜತೆ ಹಗಲಿರುಳು ಶ್ರಮಿಸುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಜಿಲ್ಲೆಗಳ ಮುಖಂಡರ ಜೊತೆ ಸಭೆ ನಡೆಸಲಾಯಿತು. ಸಭೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಪಕ್ಷದ ಹಿರಿಯ ನಾಯಕ, ಶಾಸಕ ವೆಂಕಟಶಿವಾರೆಡ್ಡಿ, ಶಾಸಕರಾದ ಮೇಲೂರು ರವಿ, ಸಮೃದ್ಧಿ ಮಂಜುನಾಥ್, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಶ್ರೀನಿವಾಸ ಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಬಿ.ಎಂ. ಫಾರೂಖ್, ಟಿ.ಎ. ಶರವಣ, ಪಕ್ಷದ ನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ಹಿರಿಯ ಮುಖಂಡರಾದ ಜವರಾಯಿಗೌಡ, ಸಿಎಂಆರ್ ಶ್ರೀನಾಥ್, ಮುನೇಗೌಡ, ಬಂಗಾರಪೇಟೆ ಮಲ್ಲೇಶ್ ಮುಂತಾದವರು ಇದ್ದರು.
ಇದನ್ನೂ ಓದಿ: ಮಂಗಳೂರಿನಲ್ಲಿ ನೈತಿಕ ಪೊಲೀಸ್ಗಿರಿ ತಡೆಯಲು ಆ್ಯಂಟಿ ಕಮ್ಯೂನಲ್ ವಿಂಗ್ : ಗೃಹ ಸಚಿವ ಪರಮೇಶ್ವರ್ ಘೋಷಣೆ